ಇಂಡಿ

ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮ

ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮ

ಇಂಡಿ: ಪಟ್ಟಣದ ಶಾಂತೇಶ್ವರ ವಿದ್ಯಾವರ್ಧಕ ಸಂಘದಡಿಯಲ್ಲಿರುವ ಸೌ. ಎ.ಜಿ. ಗಾಂಧಿ ಬಾಲಕಿಯರ ಪ್ರೌಢಶಾಲೆಯಲ್ಲಿ ಬುಧವಾರ 2022-23ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 

ಸಮಾರಂಭವನ್ನು ಉದ್ಘಾಟಿಸಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕ್ಷೇತ್ರ ಸಮನ್ವಯಾಧಿಕಾರಿ ಎಸ್‌.ಆರ್‌.ನಡಗಡ್ಡಿಯವರು ಸೌ.ಎ.ಜಿ.ಗಾಂಧಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕ್ರೀಡೆಯ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಾ ವಿದ್ಯಾರ್ಥಿನಿಯರಲ್ಲಿ ದೇಶದ ಸಂವಿಧಾನದ ಅರಿವು ಹಾಗೂ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಬಹಳ ಅರ್ಥಪೂರ್ಣವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆಂದು ಅಭಿಪ್ರಾಯಪಟ್ಟರು. 

ಇನ್ನೋರ್ವ ಅತಿಥಿಗಳಾದ ತಾಲೂಕ ದೈಹಿಕ ಪರೀವೀಕ್ಷಕ ಎ.ಎಸ್‌.ಲಾಳಸೇರಿ ಮಾತನಾಡಿ,  ವಿದ್ಯಾರ್ಥಿನಿಯರಿಗಾಗಿ ವಿಶೇಷ ಕ್ರೀಡಾಕೋಣೆ ರಚಿಸಿ ಆಡಳಿತ ಮಂಡಳಿಯವರು ಸಧೃಢ ಶರೀರದಲ್ಲಿ ಮಾತ್ರ ಸಧೃಢ ಮನಸ್ಸು ಸಾಧ್ಯವೆಂದು ನಿರೂಪಿಸಿದ್ದಾರೆಂದು ಅಭಿಪ್ರಾಯಪಟ್ಟರು.  

ಶಾಲೆಯ ನಿವೃತ್ರ ಶಿಕ್ಷಕ ಎಸ್‌.ಡಿ.ಬಗಲಿಯವರು ಮಾತನಾಡುತ್ತಾ ಶಾಲೆಯ ಶೈಕ್ಷಣಿಕ ಕ್ರಿಯಾ ಯೋಜನೆಯು ವಿದ್ಯಾರ್ಥಿನಿಯರ ಶ್ರೇಯೋಭಿವೃದ್ಧಿ ಹಾಗೂ ಉತ್ತಮ ಫಲಿತಾಂಶಕ್ಕೆ ಪೂರಕವಾಗಿದೆ. ಇದಕ್ಕೆಲ್ಲ ಶ್ರಮಿಸಿದ ಮಾನ್ಯ ಆಡಳಿತ ಮಂಡಳಿಯವರಿಗೂ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಕುಲಕರ್ಣಿಯವರ ದೂರದೃಷ್ಟಿ ಯೋಜನೆಗೂ ಮತ್ತು ಬೋಧಕ ಸಿಬ್ಬಂದಿಯವರ ಶ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.  

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಸಿದ್ದಣ್ಣ ತಾಂಬೆಯವರು ಮಾತನಾಡಿ ಸಂಸ್ಥೆ ಹಾಗೂ ಶಾಲೆಯು ಹೊಸ ದಿಕ್ಕಿನಡೆಗೆ ಸಾಗುತ್ತಿದೆ. ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದು ಇದರ ಸದುಪುಯೋಗವನ್ನು ತಾಲೂಕಿನ ವಿದ್ಯಾರ್ಥಿನಿಯರು ಪಡೆದುಕೊಳ್ಳಲಿ ಎಂದು ಆಶಿಸಿದರು. 

ಪ್ರಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ರಾಘವೇಂದ್ರ ಕುಲಕರ್ಣಿಯವರು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.  

ಸಹಶಿಕ್ಷಕ ಎಮ್‌.ಎಸ್‌. ಕಡಣಿ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.  

ವೇದಿಕೆಯಲ್ಲಿ ಶ್ರೀಧರ ಹಿಪ್ಪರಗಿ, ಆರ್‌.ಸಿ.ಮೇತ್ರಿ, ಆರ್‌.ಎಸ್‌.ಬಗಲಿ ಶಾಲಾ ಪ್ರಧಾನಮಂತ್ರಿ ಕುಮಾರಿ.ಆರತಿ ವಾಲಿಕಾರ, ಸಭಾಪತಿ ಕುಮಾರಿ ವೈಷ್ಣವಿ ಜಾಮಗೊಂಡಿ ಉಪಸ್ಥಿತರಿದ್ದರು. ಎಚ್‌.ಬಿ.ಕೃಷ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

ಸುದ್ದಿ ಓದಿ