ರಾಣೆಬೆನ್ನೂರ

ಸ್ಪಟಿಕಲಿಂಗವು ಶಿವನ ಸ್ವರೂಪದ್ದಾಗಿದೆ ; ಕಾಶಿ ಶ್ರೀಗಳು

ಸ್ಪಟಿಕಲಿಂಗವು ಶಿವನ ಸ್ವರೂಪದ್ದಾಗಿದೆ ; ಕಾಶಿ ಶ್ರೀಗಳು

ರಾಣಿಬೆನ್ನೂರ:ಜ 24ಮಠ ಮಂದಿರಗಳಿಗೆ ಭಕ್ತರೇ ಆಸ್ತಿಯಾಗಿದ್ದು ಎಲ್ಲಾ ಧರ್ಮದ ಜನರಿಗೂ ಪಂಚಪೀಠದ ಮಠಗಳು ಆಶ್ರಯ ನೀಡಿವೆ ಎಂದು ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯರು ನುಡಿದರು. ತಾಲೂಕಿನ ಲಿಂಗದಹಳ್ಳಿಯ ರಂಭಾಪುರ ಶಾಖಾಮಠದಲ್ಲಿ ಸೋಮವಾರ ಕೋಟಿ ರೂ ಮೌಲ್ಯದ ಸ್ಪಟಿಕ ಶಿವಲಿಂಗ ಹಾಗೂ ಪಚ್ಚೆ ಶಿವಲಿಂಗಗಳ ಪ್ರಾಣ ಪ್ರತಿಷ್ಠಾಪನೆ, ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ವೀರಭದ್ರ ಸ್ವಾಮೀಜಿ 25ನೇ ವರ್ಷದ ಪಟ್ಟಾಧಿಕಾರದ ರಜಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 

 ನಾಡಿನ ಜನತೆ ವೀರಶೈವ ಧರ್ಮದ ಗುರು ಪೀಠಗಳಿಗೆ ಗೌರವ ನೀಡುತ್ತಾ ಬಂದಿದ್ದಾರೆ. ನಮ್ಮ ಹಿಂದಿನ ಜಗದ್ಗುರುಗಳು ಶಿಗ್ಗಾವಿ ತಾಲೂಕು ಬಂಕಾಪುರ ಬಳಿ ಬಿಸಲಹಳ್ಳಿ ಗ್ರಾಮದಲ್ಲಿ ದಕ್ಷಿಣ ಕಾಶಿ ಸ್ಥಾಪಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ವೀರಭದ್ರ ಶಿವಾಚಾರ್ಯರು ಲಿಂಗದಹಳ್ಳಿಯಲ್ಲಿನ ಸ್ಪಟಿಕ ಲಿಂಗ ಮಠವನ್ನು ಉತ್ತಮ ರೀತಿಯಲ್ಲಿ ಕಟ್ಟಿ ಬೆಳೆಸಿದ್ದು ಮುಂದಿನ ದಿನಗಳಲ್ಲಿ ಇದರ ಶಾಖೆಯನ್ನು ರಾಣಿಬೆನ್ನೂರು ನಗರದಲ್ಲಿ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.  ಕವಲೆದುರ್ಗದ  ಮರುಳಸಿದ್ಧ ಶಿವಾಚಾರ್ಯರು ಮಾತನಾಡಿ, ಪಂಚಪೀಠದ ಮಠಗಳು ಅಕ್ಷರ ಮತ್ತು ಅನ್ನ ದಾಸೋಹ ನೀಡುವ ಪೀಠಗಳಾಗಿವೆ.  

ಅನುಲೋಮ, ವಿಲೋಮ ಪದ್ಧತಿಯಲ್ಲಿ ಭಸ್ಮಧಾರಣೆಯಿಂದ ಮನುಷ್ಯನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದರು. ಲಿಂಗದಹಳ್ಳಿ ಮಠದ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ತೋಗರ್ಸಿ ಮಳೇಹಿರೇಮಠದ ಮಹಾಂತದೇಶಿಕೇಂದ್ರ ಶಿವಾಚಾರ್ಯರು, ಗೋಣಿಬೀಡು ಶಿವಯೋಗಶ್ರಮದ ಡಾ.ಸಿದ್ದಲಿಂಗ ಸ್ವಾಮೀಜಿ, ಕವಲೆದುರ್ಗದ ಮರುಳಸಿದ್ದ ಶಿವಾಚಾರ್ಯರು, ರಟ್ಟಿಹಳ್ಳಿಯ ಶಿವಲಿಂಗ ಶಿವಾಚಾರ್ಯರು, ದಿಂಡದಹಳ್ಳಿಯ ಪಶುಪತಿ ಶಿವಾನಂದ ಶಿವಾಚಾರ್ಯರು, ಮಣಕೂರ ಮಲ್ಲಿಕಾರ್ಜುನ ಸ್ವಾಮೀಜಿ, ನರಸಾಪುರದ ಶಿವಕುಮಾರ ಶಿವಶರಣರು ಸಾನ್ನಿಧ್ಯ ವಹಿಸಿದ್ದರು.  

ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಮಾತನಾಡಿದರು. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ನಿರ್ದೇಶಕಿ ಭಾರತಿ ಅಳವಂಡಿ, ಕೆಇಬಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎನ್‌.ಜಯರಾಜ್, ಎಚ್‌.ಎಸ್‌.ಬಸವರಾಜಯ್ಯ, ಮಲ್ಲಿಕಾರ್ಜುನ ಅಳವಂಡಿ, ಎಸ್‌.ಎಸ್‌.ರಾಮಲಿಂಗಣ್ಣನವರ, ಪಿ.ಆರ್‌.ಕುಪ್ಪೇಲೂರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸುಜಿತ್ ಜಂಬಗಿ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಪೂರ್ವದಲ್ಲಿ ಕಾಶಿ ಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮೆರವಣಿಗೆಯು ಸುಮಂಗಲಿಯರ ಪೂರ್ಣಕುಂಭ, ಸಕಲ ಮಂಗಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠಕ್ಕೆ ಬಂದು ಸೇರಿತು. ನಂತರ ಕಾಶಿ ಜಗದ್ಗುರುಗಳು ನೂತನ ಸ್ಪಟಿಕ ಶಿವಲಿಂಗದ ಪ್ರಾಣ ಪ್ರತಿಪ್ಠಾಪನೆ ನೆರವೇರಿಸಿದರು. 


ಸುದ್ದಿ ಓದಿ