ಆಳೂರ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಮನವಿ
ಇಂಡಿ: ತಾಲ್ಲೂಕಿನ ಆಳೂರ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ಒತ್ತಾಯಿಸಿ ನೂರಾರು ವಿದ್ಯಾರ್ಥಿಗಳು ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ.ಪಾಟೀಲರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ಆಳೂರ ಗ್ರಾಮದಿಂದ ಪ್ರತಿ ನಿತ್ಯ 50 ಜನ ವಿದ್ಯಾರ್ಥಿಗಳು ಬೆಳಿಗ್ಗೆ 6 ಗಂಟೆಗೆ ಇಂಡಿ ಪಟ್ಟಣದಲ್ಲಿರುವ ಶಾಲಾ ಕಾಲೇಜುಗಳಿಗೆ ಬರುತ್ತೇವೆ. ನಮ್ಮ ಶಾಲಾ ಕಾಲೇಜುಗಳು ಮಧ್ಯಾಹ್ನ 1.30 ಗಂಟೆಗೆ ಬಿಡುತ್ತವೆ. ಆ ಸಂದರ್ಭದಲ್ಲಿ ನಮ್ಮೂರಿಗೆ ತೆರಳಲು ಬಸ್ ಸೌಕರ್ಯವಿಲ್ಲ. ಮಧ್ಯಾಹ್ನ 3.30 ಗಂಟೆಗೆ ಒಂದು ಬಸ್ ಇದೆ. ಆದರೆ ಅದು ಸಾಯಂಕಾಲ 6 ಗಂಟೆಗೆ ಬಿಡುತ್ತದೆ. ಹೀಗಾಗಿ ನಾವು ಬೆಳಿಗ್ಗೆ 6 ಗಂಟೆಗೆ ಮನೆ ಬಿಟ್ಟವರು ಸಾಯಂಕಾಲ 7 ರಿಂದ 7.30 ಗಂಟೆಗೆ ಮನೆ ತಲುಪುತ್ತೇವೆ.
ಈ ಬಗ್ಗೆ ಬಸ್ ಡಿಪೋ ವ್ಯವಸ್ಥಾಪಕರನ್ನು ಭೇಟಿ ಮಾಡಿ ಸಾಕಷ್ಟು ಸಲ ಮನವಿ ಸಲ್ಲಿಸಿದ್ದೇವೆ. ಆದರೆ ಯಾವದೇ ಪ್ರಯೋಜನವಾಗಿಲ್ಲ. ಕಾರಣ ನೀವಾದರೂ ಮಧ್ಯಸ್ಥಿಕೆ ವಹಿಸಿ, ನಮಗೆ ಮಧ್ಯಾಹ್ನ ಬಸ್ ವ್ಯವಸ್ಥೆ ಮಾಡಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು.
ಮನವಿ ಸ್ವೀಕರಿಸಿದ ಬಿ.ಡಿ.ಪಾಟೀಲ ಮಾತನಾಡಿ, ಬಸ್ ಡಿಪೋ ವ್ಯವಸ್ಥಾಪಕರನ್ನು ಸಂಪರ್ಕಿಸಿ ವ್ಯವಸ್ಥೆ ಮಾಡಿಕೊಡುವದಾಗಿ ಭರವಸೆ ನೀಡಿದರು.
ಶ್ರೀಧರ ವಾಲೀಕಾರ, ಅಭಿಷೇಕ ಸಲದಹಳ್ಳಿ, ಆನಂದ ಪಾಟೀಲ, ರವಿಕಾಂತ ಬೇವನೂರ, ಶಶಿಕಾಂತ ನಾಟೀಕಾರ, ಸಂದೀಪ ಚೌಹಾಣ, ಬಾಹುಬಲಿ ಜೀರಗೆ, ಸಂಕೇತ ನಾಟೀಕಾರ, ಪ್ರಮೋದ ಕೋಳಿ, ಬೀರ್ಪ ಹಿರೇಕುರುಬರ ಸೇರಿದಂತೆ ಅನೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.