ರಾಯಬಾಗ : ಮೂರು ದಿನಗಳ ಕಾಲ ಭವ್ಯ ದಿಂಡಿ, ರಿಂಗಣ ಕಾರ್ಯಕ್ರಮ
ರಾಯಬಾಗ 24 : ಪಟ್ಟಣದ ಭರಮಾ ಅಣ್ಣಪ್ಪಾ ಚೌಗುಲೆ ಶಿಕ್ಷಣ ಸಂಸ್ಥೆಯ ಉತ್ಸವವು ಅ.28 ರಿಂದ 30 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ವಕೀಲರಾದ ಎಲ್.ಬಿ.ಚೌಗುಲೆ ಹೇಳಿದರು. ಶನಿವಾರ ಪಟ್ಟಣದ ಚೌಗುಲೆ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಉತ್ಸವ ಅಂಗವಾಗಿ ಸನಾತನ ಧರ್ಮದ ವಾಗ್ಮಿ, ಭಾಷಣಕಾರ್ತಿ ಬೆಂಗಳೂರಿನ ಹಾರಿಕಾ ಮಂಜುನಾಥ ಆಗಮಿಸಲಿದ್ದಾರೆ. ಪಂಢರಪುರದ ಗೋಪಾಲ ವಾಸ್ಕರ ಮಹಾರಾಜರ ಸಾನಿಧ್ಯದಲ್ಲಿ ಭವ್ಯ ದಿಂಡಿ ಮತ್ತು ರಿಂಗಣ ಕಾರ್ಯಕ್ರಮ ಜರುಗಲಿದೆ. ಹಾಗೂ ಆದಿ ಬಣಜಿಗ ಸಮುದಾಯದವರ ವಧು ವರರ ಸಮಾವೇಶ ಹಮ್ಮಿಕೊಂಡಿರುವುದಾಗಿ ತಿಳಿಸಿದರು.ಅ.28 ರಂದು ಮುಂ.10 ಗಂಟೆಗೆ ಸಂಸ್ಥೆಯ ಉತ್ಸವದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ನಂದಿಕುರಳಿ ಪಂಚಲಿಂಗೇಶ್ವರ ಮಠದ ವೀರಭದ್ರೇಶ್ವರ ಸ್ವಾಮಿಜೀಯವರು ವಹಿಸಲಿದ್ದಾರೆ. ಉದ್ಘಾಟಕರಾಗಿ ಗದಗದ ಬ್ರಹನ್ಮಠದ ಸದಾಶಿವಾನಂದ ಸ್ವಾಮಿಜೀ ಹಾಗೂ ಅತಿಥಿಗಳಾಗಿ ಬೆಂಗಳೂರಿನ ಸನಾತನ ಧರ್ಮದ ವಾಗ್ಮಿ ಹಾರಿಕಾ ಮಂಜುನಾಥ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎಲ್.ಬಿ.ಚೌಗುಲೆ, ಗೌರವಾಧ್ಯಕ್ಷತೆಯನ್ನು ನಿರ್ದೇಶಕ ಅಮರ ನಾಗರಾಳೆ ವಹಿಸಲಿದ್ದಾರೆ. ಅ.29 ರಂದು ಮುಂ.10 ಗಂಟೆಗೆ ಹಿರಿಯರ ಸ್ಮರಣೆ ಹಾಗೂ ಆದಿ ಬಣಜಿಗ ಸಮುದಾಯದವರ ವಧು ವರರ ಸಮಾವೇಶದ ಸಾನ್ನಿಧ್ಯವನ್ನು ಹಂಚಿನಾಳ ಭಕ್ತಿಯೋಗಾಶ್ರಮದ ಮಹೇಶಾನಂದ ಸ್ವಾಮಿಜೀ ವಹಿಸಲಿದ್ದಾರೆ. ಅತಿಥಿಗಳಾಗಿ ಧಾರವಾಡದ ಯುವವಾಗ್ಮಿ, ಲೇಖಕ ಅಮೋಘಸ್ವಾಮಿ ಸಾಂಬಯ್ಯ ಹಿರೇಮಠ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ವಿನಯ ಚೌಗುಲೆ, ನಿರ್ದೇಶಕಿ ಐಶ್ವರ್ಯ ಚೌಗುಲೆ ವಹಿಸಲಿದ್ದಾರೆ. ಅ.30 ರಂದು ಮುಂ.10 ಗಂಟೆಗೆ ಸತೀಶ ಚೌಗುಲೆ ಜನ್ಮದಿನೋತ್ಸವ ನೆನಪು ಹಾಗೂ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಮಮದಾಪೂರದ ಮೌನ ಮಲ್ಲಿಕಾರ್ಜುನ ಶಿವಯೋಗಿಗಳು ವಹಿಸಲಿದ್ದಾರೆ. ಅಂದು ಪಟ್ಟಣದಲ್ಲಿ ಪಂಢರಪುರದ ಗೋಪಾಲ ತುಕಾರಾಮ ವಾಸ್ಕರ ಮಹಾರಾಜರ ನೇತೃತ್ವದಲ್ಲಿ ದಿಂಡಿಯಾತ್ರೆ ಮತ್ತು ಭವ್ಯ ರಿಂಗಣ ಕಾರ್ಯಕ್ರಮ ನಡೆಯಲಿದೆ, ಗೌರವಾಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷೆ ಭಾರತಿ ಚೌಗುಲೆ ವಹಿಸಲಿದ್ದಾರೆ. ಸಂಸ್ಥೆಯ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ಸಿಗೊಳಿಸಬೇಕೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿನಯ ಚೌಗುಲೆ, ಪ್ರಾಚಾರ್ಯರಾದ ಎಸ್.ಎಸ್.ದಿಗ್ಗೇವಾಡಿ, ಎಸ್.ಎ.ನಾಂದನಿ, ಕೊಟ್ರೇಶ ಎಚ್.ಎಮ್ ಇದ್ದರು.