ರೈತರ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಪ್ರತಿಭಟನೆ
ಬೈಲಹೊಂಗಲ 28: ಸಮೀಪದ ದೇವಲಾಪುರ ಹಾಗೂ ನೇಗಿನಹಾಳ ಗ್ರಾಮಗಳ ಮಾರ್ಗ ಮಧ್ಯೆ ಇರುವ ರಸ್ತೆ ಸಂಪೂರ್ಣ ಹಾಳಾಗಿದೆ ಹಾಗೂ ಸೇತುವೆ ಅವೈಜ್ಞಾನಿಕವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೈಲಹೊಂಗಲ ತಾಲೂಕು ಅಧ್ಯಕ್ಷ ಮಡಿವಾಳಪ್ಪ ಹಿರೇಹೊಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಳೆಗಾಲದಲ್ಲಿ ಬೈಲಹೊಂಗಲದ ಬಸವೇಶ್ವರ ಆಶ್ರಯ ಕಾಲನಿ, ನೇಗಿನಹಾಳ, ಯರಡಾಲ್, ಸಾಣಿಕೊಪ್ಪ ಸೇರಿದಂತೆ ಹಲವು ಭಾಗಗಳಿಂದ ನೀರು ಇದೇ ಸೇತುವೆ ಮುಖಾಂತರ ಮಲಪ್ರಭಾ ನದಿಯನ್ನು ಸೇರುತ್ತದೆ.
ಆದರೆ ಸೇತುವೆ ಚಿಕ್ಕದಾಗಿದ್ದು, ಪ್ರಮಾಣದಲ್ಲಿ ಭಾರಿ ಪ್ರಮಾಣದ ನೀರನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣದಿಂದಾಗಿ ಮೇಲ್ಭಾಗದಿಂದ ಬರುವ ನೀರು ಅಕ್ಕಪಕ್ಕದಲ್ಲಿರುವ ರೈತರ ಹೊಲಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗುತ್ತಿದೆ. ಅದೂ ಅಲ್ಲದೆ ಮೊನ್ನೆ ಸುರಿದ ಭಾರಿ ಮಳೆಯಿಂದಾಗಿ ಮಳೆಯ ನೀರು ಹೊಲಗಳಿಗೆ ನುಗ್ಗಿ ಬೆಳೆ ಹಾನಿ ಮಾಡುವುದಲ್ಲದೆ ಪಕ್ಕದಲ್ಲಿರುವ ರಸ್ತೆಯು ಕೂಡ ಜವುಳು ಹಿಡಿದು ಕುಸಿದ ಪರಿಣಾಮ ನೇಗಿನಹಾಳ ಗ್ರಾಮದ ರೈತರು ದೇವಲಾಪುರ ಹದ್ದೆಯಲ್ಲಿರುವ ತಮ್ಮ ಜಮೀನುಗಳಿಗೆ ತೆರಳಲು ಸಾದ್ಯವಾಗುತ್ತಿಲ್ಲ, ಅದೇ ರೀತಿ ದೇವಲಾಪುರ ಗ್ರಾಮದ ರೈತರು ನೇಗಿನಹಾಳ ಹದ್ದೆಯಲ್ಲಿರುವ ತಮ್ಮ ಜಮೀನುಗಳಿಗೆ ತೆರಳಲು ಸಮರ್ಕ ರಸ್ತೆ ಇಲ್ಲದೆ ಪರದಾಡುವಂತಾಗಿದೆ.
ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ರೈತ ಸಂಘದ ತಾಲೂಕು ಅಧ್ಯಕ್ಷ ಮಡಿವಾಳಪ್ಪ ಹಿರೇಹೊಳಿ ಮಾತನಾಡಿ, ಜನಪ್ರತಿನಿಧಿಗಳ ನಿರ್ಲಕ್ಷದಿಂದ ರಸ್ತೆ ಹದಗೆಟ್ಟಿದೆ ಹಾಗೂ ಸುಮಾರು 2 ಕೋಟಿ ವೆಚ್ಚದಲ್ಲಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣವಾದಲ್ಲಿ ಈ ಭಾಗದ ರೈತರ ಸಮಸ್ಯೆ ಬಗೆಹರಿಸಲು ಸಾದ್ಯ ಜನಪ್ರತಿನಿಧಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡಲಾಗವುದು ಎಂದರು.
ರೈತ ಸಂಘದ ಉಪಾಧ್ಯಕ್ಷ, ಈರ್ಪ ಎತ್ತಿನಮನಿ, ತಾಲೂಕು ಸಂಚಾಲಕ ಬಸವರಾಜ್ ಉಪ್ಪಾರ,ಶಿವು ಜೋಳದ ಸೇರಿದಂತೆ ದೇವಲಾಪುರ ಗ್ರಾಮದ ರೈತ ಭಾಂದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.