ರಾಷ್ಟ್ರೀಯ

ಕುಟುಂಬ ಪಿಂಚಣಿ ಪಾವತಿಯಲ್ಲಿ ವಿಳಂಬ: ದಾಖಲೆ, ನಾಮನಿರ್ದೇಶನ ನವೀಕರಿಸಲು ಕೇಂದ್ರದ ಸೂಚನೆ

ಕುಟುಂಬ ಪಿಂಚಣಿ ಪಾವತಿಯಲ್ಲಿ ವಿಳಂಬ: ದಾಖಲೆ, ನಾಮನಿರ್ದೇಶನ ನವೀಕರಿಸಲು ಕೇಂದ್ರದ ಸೂಚನೆ

ನವದೆಹಲಿ, ನ. 27  — ಕುಟುಂಬ ಪಿಂಚಣಿ ಮತ್ತು ಪಿಂಚಣಿದಾರರ ಜೀವಿತಾವಧಿಯಲ್ಲಿ ಬಾಕಿ ಉಳಿದ ಪಿಂಚಣಿ ಮೊತ್ತದ ಪಾವತಿಯಲ್ಲಿ ಗಣನೀಯ ವಿಳಂಬ ಕಂಡುಬಂದ ಹಿನ್ನೆಲೆಯಲ್ಲಿ, ಪಿಂಚಣಿ ಪಾವತಿ ಆದೇಶಗಳನ್ನು (ಪಿಪಿಒ) ಪರಿಶೀಲಿಸಿ, ಕುಟುಂಬದ ವಿವರಗಳನ್ನು ನವೀಕರಿಸುವಂತೆ ಹಾಗೂ ನಾಮನಿರ್ದೇಶನ ಮಾನ್ಯವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರ ಪಿಂಚಣಿದಾರರಿಗೆ ಸೂಚಿಸಿದೆ.

ಸಿಪಿಇಎನ್‌ಗ್ರಾಮ್ಸ್ (CPENGRAMS) ಪೋರ್ಟಲ್‌ನಲ್ಲಿ ದಾಖಲಾಗಿದ್ದ ಕುಂದುಕೊರತೆಗಳನ್ನು ಪರಿಶೀಲಿಸಿದಾಗ ಪಾವತಿಯಲ್ಲಿ ವಿಳಂಬ ಕಂಡುಬಂದಿದೆ ಎಂದು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ತನ್ನ ಕಚೇರಿ ಜ್ಞಾಪನಪತ್ರದಲ್ಲಿ ತಿಳಿಸಿದೆ. ಪಿಂಚಣಿದಾರರಿಗೆ ಸಂಬಂಧಿತ ಸೂಚನೆಗಳು ಮತ್ತು ಕಾರ್ಯವಿಧಾನಗಳ ಬಗ್ಗೆ ಅರಿವಿದ್ದರೆ ಈ ವಿಳಂಬವನ್ನು ತಪ್ಪಿಸಬಹುದಿತ್ತು ಎಂದು ಇಲಾಖೆ ಹೇಳಿದೆ.

ಪಿಂಚಣಿ ಪಾವತಿ ಆದೇಶದಲ್ಲಿ ನಮೂದಿಸಿರುವ ಕುಟುಂಬ ಸದಸ್ಯರ ಹೆಸರು ಮತ್ತು ಜನ್ಮ ದಿನಾಂಕಗಳನ್ನು ಪರಿಶೀಲಿಸಿ, ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಬೇಕು. ಮಗಳು ವಿಧವೆಯಾದರೆ ಅಥವಾ ವಿಚ್ಛೇದನ ಪಡೆದರೆ, ಮಗು ಅಥವಾ ಸಹೋದರ–ಸಹೋದರಿಗೆ ಅಂಗವೈಕಲ್ಯ ಉಂಟಾದರೆ, ಅಂತಹ ಬದಲಾವಣೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು. ನಿವೃತ್ತಿಯ ನಂತರ ಮದುವೆ, ಮರುಮದುವೆ ಅಥವಾ ಮಗುವಿನ ಜನನವಾದರೆ, ನಮೂನೆ 5ರ ಮೂಲಕ ಕಚೇರಿ ಮುಖ್ಯಸ್ಥರಿಗೆ ಮಾಹಿತಿ ನೀಡಬೇಕು.

ನಿಗದಿತ ಷರತ್ತುಗಳಿಗೆ ಒಳಪಟ್ಟು, ಶಾಶ್ವತ ಅಂಗವೈಕಲ್ಯ ಹೊಂದಿರುವ ಅರ್ಹ ಮಕ್ಕಳು, ಅವಲಂಬಿತ ಪೋಷಕರು ಹಾಗೂ ಅಂಗವೈಕಲ್ಯ ಹೊಂದಿರುವ ಅವಲಂಬಿತ ಸಹೋದರ–ಸಹೋದರಿಯರನ್ನು ಕುಟುಂಬ ಪಿಂಚಣಿಗೆ ಅರ್ಹರೆಂದು ಪಿಂಚಣಿ ಪಾವತಿ ಆದೇಶದಲ್ಲಿ ಸೇರಿಸಲು ಪಿಂಚಣಿದಾರರು ಅಥವಾ ಅವರ ಜೀವನ ಸಂಗಾತಿ ನಮೂನೆ 8ರ ಮೂಲಕ ಅರ್ಜಿ ಸಲ್ಲಿಸಬಹುದು. ಪಿಂಚಣಿ ಪಾವತಿ ಆದೇಶದ ಪ್ರತಿ ಕಳೆದುಹೋದರೆ, ಹರಿದಿದ್ದರೆ ಅಥವಾ ಸವೆದಿದ್ದರೆ, ನಕಲು ಪ್ರತಿಗಾಗಿ ಸಂಬಂಧಪಟ್ಟ ಬ್ಯಾಂಕ್ ಅನ್ನು ಸಂಪರ್ಕಿಸಬಹುದು.

ಪಿಂಚಣಿದಾರರ ನಿಧನದ ವೇಳೆಗೆ ಬಾಕಿ ಉಳಿದಿರುವ ಪಿಂಚಣಿ ಮೊತ್ತವನ್ನು ನಾಮನಿರ್ದೇಶಿತ ವ್ಯಕ್ತಿಗೆ ಪಾವತಿಸಲು ಅನುಕೂಲವಾಗುವಂತೆ, ಪಿಂಚಣಿ ವಿತರಣಾ ಪ್ರಾಧಿಕಾರಕ್ಕೆ ನಮೂನೆ ‘ಎ’ ಸಲ್ಲಿಸಿ ನಾಮನಿರ್ದೇಶನ ದಾಖಲಿಸಬೇಕು ಅಥವಾ ನವೀಕರಿಸಬೇಕು ಎಂದು ಇಲಾಖೆ ತಿಳಿಸಿದೆ.

ಅಧೀನ ಕಾರ್ಯದರ್ಶಿ ಸಂಜಯ್ ಭಾರ್ತಿ ಸಹಿ ಮಾಡಿರುವ ಜ್ಞಾಪನಪತ್ರವನ್ನು ಕೇಂದ್ರದ ಎಲ್ಲ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಕಳುಹಿಸಲಾಗಿದೆ.

ಸುದ್ದಿ ಓದಿ