ರಾಷ್ಟ್ರೀಯ

ಜಜ್ಜರ್‌ನಲ್ಲಿ ತಾಯಿಗೆ ಬೆಂಕಿ ಹಚ್ಚಿದ ಆರೋಪದಡಿ ಮಗನ ಬಂಧನ

ಜಜ್ಜರ್‌ನಲ್ಲಿ ತಾಯಿಗೆ ಬೆಂಕಿ ಹಚ್ಚಿದ ಆರೋಪದಡಿ ಮಗನ ಬಂಧನ

ಜಜ್ಜರ್‌, ನ. 28 (ಯುಎನ್‌ಐ) — ಹಣ ನೀಡಲು ನಿರಾಕರಿಸಿದ ತಾಯಿಗೆ ಬೆಂಕಿ ಹಚ್ಚಿದ ಆರೋಪದಡಿ ಹರಿಯಾಣದ ಜಜ್ಜರ್‌ ಜಿಲ್ಲೆಯ ಬಾಗ್‌ಪುರ ಗ್ರಾಮದ ಸುಮಿತ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಆರೋಪಿಯನ್ನು ಜಜ್ಜರ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಬಾಗ್‌ಪುರ ಗ್ರಾಮದ ನಿವಾಸಿ ಬಿಮ್ಲಾ ಅವರಿಗೆ ಸುಟ್ಟ ಗಾಯಗಳಾಗಿರುವ ಬಗ್ಗೆ ನವೆಂಬರ್‌ 26ರಂದು ಮಾಹಿತಿ ದೊರೆಯಿತು ಎಂದು ಬೆರಿ ಪೊಲೀಸ್ ಠಾಣೆಯ ಉಸ್ತುವಾರಿ ಸಬ್‌ ಇನ್‌ಸ್ಪೆಕ್ಟರ್‌ ಯೋಗೇಶ್‌ ಕುಮಾರ್‌ ತಿಳಿಸಿದ್ದಾರೆ. ಸುಮಿತ್‌ ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿ ಬಳಿಕ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಿ ಬಿಮ್ಲಾ ಅವರ ಸೋದರಳಿಯ ಚೇತನ್‌ ದೂರು ನೀಡಿದ್ದರು.

ದೂರು ಮತ್ತು ವೈದ್ಯಕೀಯ ವರದಿ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ರೋಹ್ಟಕ್‌ನ ಪಿಜಿಐಎಂಎಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಮ್ಲಾ ಅವರು ಬಳಿಕ ಮೃತಪಟ್ಟರು. ಈ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 103(1)ರ ಅಡಿಯಲ್ಲಿ ಕೊಲೆ ಆರೋಪವನ್ನು ಪ್ರಕರಣಕ್ಕೆ ಸೇರಿಸಲಾಗಿದೆ.

ವಿಚಾರಣೆ ವೇಳೆ ಸುಮಿತ್‌ ತನ್ನ ಮನೆಯಲ್ಲಿ ಘಟನೆ ನಡೆದಿದೆ ಎನ್ನಲಾದ ಸ್ಥಳವನ್ನು ತೋರಿಸಿದ್ದಾನೆ. ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಬೆಂಕಿಪೊಟ್ಟಣವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಿತ್‌ ಕುಟುಂಬದವರ ಬಳಿ ಆಗಾಗ ಹಣ ಕೇಳುತ್ತಿದ್ದ. ತಾಯಿ ಹಣ ನೀಡಲು ನಿರಾಕರಿಸಿದಾಗ ಆತ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಸುದ್ದಿ ಓದಿ