ಹೈಟೆಕ್ ಜೋಳದಲ್ಲಿ ಕಲಬೆರಕೆ ಮತ್ತು ಕಳಪೆ; ಸಂಕಷ್ಟದಲ್ಲಿ ರೈತರು; ಬೇಕಾ ಬಿಟ್ಟಿ ಪರೀಶೀಲಿಸಿದ ತಜ್ಞರ ತಂಡ
ಲೋಕದರ್ಶನ ವರದಿ
ಕಂಪ್ಲಿ 27 : ಒಂದಲ್ಲಾ ಒಂದು ರೀತಿಯಲ್ಲಿ ರೈತಾಪಿ ವರ್ಗದ ಬದುಕು ಅತಂತ್ರದಲ್ಲಿಯೇ ಸಾಗುವಂತಾಗಿದ್ದು, ಇದಕ್ಕೆ ಉದಾಹರಣೆ ಎಂಬಂತೆ ಜೋಳವನ್ನೇ ನಂಬಿ ಬೆಳೆ ರೈತರ ಜೀವನ ನಕಲಿ ಮತ್ತು ಕಳಪೆ ಬೀಜದಲ್ಲಿ ಛದ್ರವಾಗುತ್ತಿದೆ.ತಾಲೂಕಿನ ನೆಲ್ಲುಡಿ, ಎಮ್ಮಿಗನೂರು ಸೇರಿದಂತೆ ನಾನಾ ಪ್ರದೇಶದಲ್ಲಿ ಪಂಪ್ ಸೆಟ್ ಹಾಗೂ ಮಳೆ ಆಶ್ರಿತದಲ್ಲಿ ಜಮೀನುಗಳಲ್ಲಿ ಬೆಳೆದ ಹೈಟೆಕ್ ಜೋಳವು ಬೆಳವಣಿಗೆ ವ್ಯತ್ಯಾಸದಲ್ಲಿ ರೈತನ ಬದುಕು ಸುಡುವಂತೆ ಮಾಡಿದೆ.ಇಲ್ಲಿನ ನೆಲ್ಲುಡಿ, ಎಮ್ಮಿಗನೂರು, ಕೊಟ್ಟಾಲ್, ಮಣ್ಸೂರು ಸೂಗೂರು, ಸೋಮಲಾಪುಉ ಸೇರಿದಂತೆ ಸಾವಿರಾರು ಎಕರೆ ಪ್ರದೇಶದಲ್ಲಿ ಹೈಟೆಕ್ 3201 ತಳಿಯ ಜೋಳ ಬೆಳೆ ಬೆಳೆಯಲಾಗಿದೆ.
ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಜೋಳ ಬೆಳೆಯೊಂದಿಗೆ ಬದುಕು ಕಟ್ಟಿಕೊಳ್ಳಲು ಮುಂದಾದ ರೈತರಿಗೆ ಬರ ಸಿಡಿಲಿನಂತೆ ಕಲಬೆರಕೆ ಹಾಗೂ ಕಳಪೆ ಬೀಜದ ಹೊಡೆತಕ್ಕೆ ನಲುಗುವಂತಾಗಿದೆ. ಕಳೆದ ಬಾರಿ ತುಂಗಭದ್ರ ಜಲಾಶಯದ ಕ್ರೆಸ್ಟ್ ಗೇಟ್ ದುರಸ್ಥಿಗೊಳಿಸಿದ ನಂತರ ಒಂದು ಬೆಳೆಗೆ ಮಾತ್ರ ನೀರು ಹರಿಸಿರೂ, ಕೆಲ ರೈತರಿಗೆ ಬೆಳೆಗಳು ಇಲ್ಲದೇ, ಬರಗಾಲದ ಸಂಕಷ್ಟ ಎದುರಿಸಿ, ಜೀವನ ನಿರ್ವಾಹಣೆ ಕಷ್ಟ ಅನುಭವಿಸಿದರು. ಆದರೆ, ಈ ಬಾರಿಯಾದರೂ ಮುಂಗಾರು ಬೆಳೆಗೆ ಕೆಲ ರೈತರ ಕೈ ಹಿಡಿದರೆ, ಪಂಟ್ ಸೆಟ್ ಹಾಗೂ ಮಳೆ ಆಶ್ರಿತ ರೈತರ ಬದುಕು ಮಾತ್ರ ಅತಂತ್ರದಲ್ಲಿ ಸಾಗುವಂತಾಗಿದೆ.
ಮುಂಗಾರು ಹಂಗಾಮಿನಲ್ಲಿ ರೈತರು ಪ್ರತಿ ಎಕರೆಗೆ ಸುಮಾರು 40 ಸಾವಿರ ಖರ್ಚು ಮಾಡಿ, ಹೈಟೆಕ್ ಜೋಳ ನಾಟಿ ಮಾಡಿದ್ದಾರೆ. ಈಗಾಗಲೇ ಬಹುತೇಕ ಜೋಳ ಬೆಳೆಯೂ ಬೆಳೆವಣಿಗೆ ಕಂಡರೂ, ಕಲಬೆರಕೆ ಹಾಗೂ ಕಳಪೆ ಬೀಜದಿಂದಾಗಿ 3 ಅಡಿ, 6 ಅಡಿ, 9 ಅಡಿ ವ್ಯತ್ಯಾಸದಲ್ಲಿ ಬೆಳೆದಿರುವುದು ರೈತಾಪಿ ವರ್ಗದ ಹೃದಯ ಬಡಿತ ಹೆಚ್ಚಿಸಿದೆ. ಮತ್ತು ಬರಗಾಲದಲ್ಲಿ ಜೋಳ ಕೈಹಿಡಿಯಲಿದೆ ಎನ್ನುವಷ್ಟರಲ್ಲಿ ಕಲಬೆರಕೆಗೆ ರೈತರು ಸಾಲದ ಸುಳಿಗೆ ಸಿಲುವಂತಾಗಿದೆ.ಇಲ್ಲಿನ ಪ್ರಗತಿಪರ ರೈತ ಎಮ್ಮಿಗನೂರಿನ ಧನಂಜಯ ಅವರ 25 ಎಕರೆ ಪ್ರದೇಶದಲ್ಲಿ ಪ್ರತಿ ಎಕರೆಗೆ 40 ಸಾವಿರದಂತೆ ಸುಮಾರು 10 ಲಕ್ಷ ಹಣ ವ್ಯಯಿಸಿ, ಬೀಜ, ನಾಟಿಯಿಂದ ಹಿಡಿದು ಖರ್ಚು ಮಾಡಿ, ಬೆಳೆ ಬೆಳೆಯಲಾಗಿದೆ.