ವಿವಿಧ ವೇದಿಕೆ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಪ್ರತಿಭೆಗೆ ಅವಕಾಶ : ಪಿ ಎಸ್ ಲಕ್ಕನಗೌಡರ
ಬೈಲಹೊಂಗಲ 27 : ’ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ, ಸೃಜನಶೀಲತೆ ಹಾಗೂ ಆತ್ಮವಿಶ್ವಾಸವನ್ನು ಹೊರತರುವಲ್ಲಿ ವಿವಿಧ ಚಟುವಟಿಕೆಗಳ ವೇದಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ’ ಎಂದು ವಕ್ಕುಂದ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ ಪಿ.ಎನ್. ಲಕ್ಕನಗೌಡರ ಹೇಳಿದರು.ನಗರದ ಕೆಎಲ್ಇ ಸಂಸ್ಥೆಯ ಪದವಿಪೂರ್ವ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ‘ಅಂತರಂಗ 2.0’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
’ವಿದ್ಯಾರ್ಥಿಗಳು ಪಠ್ಯಪುಸ್ತಕದ ಜ್ಞಾನದ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸೃಜನಾತ್ಮಕ ಚಟುವಟಿಕೆಗಳಲ್ಲಿಯೂ ಆಸಕ್ತಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಲು, ಅವರಲ್ಲಿನ ಆತ್ಮವಿಶ್ವಾಸ ಹೆಚ್ಚಿಸಲು ಉತ್ತಮ ಅವಕಾಶ ಕಲ್ಪಿಸುತ್ತವೆ’ ಎಂದರು.ಕೆಎಲ್ಇ ಸಂಸ್ಥೆ ಉಪಾಧ್ಯಕ್ಷ ಬಸವರಾಜ ತಟವಟಿ ಅಧ್ಯಕ್ಷತೆವಹಿಸಿ ಮಾತನಾಡಿ, ’ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳೂ ಅಗತ್ಯ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಂಡಾಗ ಗೆಲುವು, ಸೋಲನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಯುತ್ತದೆ’ ಎಂದರು.ಉಪನ್ಯಾಸಕ ಬಿ.ಎಫ್. ಹಕ್ಕರಕಿ, ಪತ್ರಕರ್ತ ರವಿಕುಮಾರ ಹುಲಕುಂದ ಮಾತನಾಡಿ, ’ವಿದ್ಯಾರ್ಥಿ ಜೀವನದಲ್ಲಿ ಓದು, ಬರವಣಿಗೆ, ಸಂವಹನ ಕಲೆ, ಸಾಮಾಜಿಕ ಪ್ರಜ್ಞೆ ಮಹತ್ವದ್ದಾಗಿವೆ. ಮೊಬೈಲ್ ಮತ್ತು ತಂತ್ರಜ್ಞಾನದ ಬಳಕೆಯ ನಡುವೆ ಪುಸ್ತಕ ಓದುವ ಹವ್ಯಾಸ, ಸೃಜನಶೀಲ ಚಿಂತನೆ, ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಎಸ್.ಬಿ. ತಟವಟಿ, ಉಪನ್ಯಾಸಕ ವಿಜಯ ಮಠದ ವೇದಿಕೆಯಲ್ಲಿ ಇದ್ದರು.ಬೆಳಗಾವಿ ಆರ್.ಎಲ್.ಎಸ್. ಪದವಿ ಮಹಾವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಎಸ್.ಎಸ್. ಅಬ್ಬಾಯಿ ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ಪ್ರೌಢಶಾಲೆಗಳಿಂದ ಆಗಮಿಸಿದ್ದ 500ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು.ವಿದ್ಯಾರ್ಥಿ ಶ್ರೇಯಸ್ ಪಾಲ್ಕರ, ಸೃಷ್ಟಿ ನಾಯ್ಕರ ನಿರೂಪಿಸಿದರು. ಪ್ರಜ್ವಲ್ ಬೋಳನ್ನವರ ಸ್ವಾಗತಿಸಿದರು.
ವಿಜಯ ಮಲಶೆಟ್ಟಿ ವಂದಿಸಿದರು.ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಚಂದ್ರಯ್ಯ ಯರಗಟ್ಟಿಮಠ ಮಾತನಾಡಿ, ’ವಿದ್ಯಾರ್ಥಿಗಳು ನಿರಂತರ ಪ್ರಯತ್ನದ ಮೂಲಕ ಸಾಧನೆಯ ಶಿಖರ ಏರಬೇಕು. ವಿದ್ಯಾರ್ಥಿ ದೆಸೆಯಿಂದಲೇ ಓದುವ ಹವ್ಯಾಸ, ವಿಚಾರಶೀಲತೆ, ಸಮಯಪ್ರಜ್ಞೆ, ಉತ್ತಮ ಸಂವಹನ ಕೌಶಲ ಬೆಳೆಸಿಕೊಳ್ಳಬೇಕು. ಸ್ಪರ್ಧೆಗಳು ಕೇವಲ ಬಹುಮಾನ ಗೆಲ್ಲುವುದಕ್ಕಷ್ಟೇ ಸೀಮಿತವಾಗದೆ,
ಹೊಸ ಅನುಭವ, ಕಲಿಕೆಗೆ ದಾರಿಯಾಗಬೇಕು’ ಎಂದು ಕಿವಿಮಾತು ಹೇಳಿದರು.ಅತಿಥಿಯಾಗಿ ಶಿಕ್ಷಕ ಎಸ್.ಎಂ. ಶೆಟ್ಟೆನ್ನವರ ಆಗಮಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಅನೇಕ ವಿದ್ಯಾರ್ಥಿಗಳು ನಗದು ಬಹುಮಾನಗಳನ್ನು ಪಡೆದು ಸಂಭ್ರಮಿಸಿದರು.ಸುಚಿತ್ರಾ, ವೈಷ್ಣವಿ ನಿರೂಪಿಸಿದರು. ಆನಂದ ಶಿವಬಸಣ್ಣವರ ಸ್ವಾಗತಿಸಿದರು.