ಇಂಡಿ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಇಂಡಿ: ಆಳಂದ ತಾಲೂಕಿನ ಕೊರಳ್ಳಿ ಗ್ರಾಮದ 14 ವರ್ಷದ ಅಪ್ರಾಪ್ತ ಬಾಲಕಿ ಪವಿತ್ರಾ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದವರನ್ನು ಕೂಡಲೇ ಬಂಧಿಸಿ ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಡಿ.ಜಿ. ಸಾಗರ ಬಣದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ ವಿರುಪಾಕ್ಷಯ್ಯ ಬಣಗಾರ ಅವರಿಗೆ ಮನವಿ ಸಲ್ಲಿಸಿದರು. 

ಪ್ರತಿಭಟನೆ ಪ್ರವಾಸಿ ಮಂದಿರದಿಂದ ಪ್ರಾರಂಭವಾಗಿ ಪಟ್ಟಣದ  ಬಸವೇಶ್ವರ ವೃತ್ತ, ಅಂಬೇಡಕರ ವೃತ್ತದಿಂದ ಹಾಯ್ದು ತಾಲೂಕು ಆಡಳಿತ ಎದುರು ಪ್ರತಿಭಟನೆ ನಡೆಸಿದರು. 

ಡಿಎಸ್‌ಎಸ್ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ವೈ.ಸಿ. ಮಣೂರ ಮಾತನಾಡಿ, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವದು ಮಾನವ ಕುಲ ತಲೆ ತಗ್ಗಿಸುವ ಕೆಲಸ, ತಪ್ಪಿತಸ್ಥರ ಮೇಲೆ ಕಠಿಣ ಕೈ ಕೊಳ್ಳಬೇಕು. ಬಾಲಕಿಯ ಕುಟುಂಬಕ್ಕೆ ರಕ್ಷಣೆ ಮತ್ತು 50 ಲಕ್ಷ ರೂ ಪರಿಹಾರ ನೀಡಬೇಕು. ಸಮಾಜದಲ್ಲಿ ಸ್ವಾಸ್ಥ್ಯ ಕೆಡಿಸುವವರನ್ನು ಗಡಿಪಾರು ಮಾಡಬೇಕು ಎಂದರು. 

ಜಿಲ್ಲಾ ಸಂಚಾಲಕರಾದ ಸಿದ್ದು ರಾಯಣ್ಣನವರ, ರಮೇಶ ನಿಂಬಾಳಕರ, ಧರೆಪ್ಪ ಮುಂದೋಲಿ, ರಾಮಚಂದ್ರ ದೊಡಮನಿ, ಪುಂಡಲೀಕ ದೊಡಮನಿ, ಬಾಬು ಗುಡುಮಿ ಮಾತನಾಡಿದರು. 

ಹಣಮಂತ ಹರಿಜನ, ಪರಮೇಶ ಇಂಗಳೆ, ಪ್ರಕಾಶ ಶಿವಪೂರ, ಪ್ರಭು ಬಬಲೇಶ್ವರ, ಯಮನಪ್ಪ ಹರಿಜನ ಮತ್ತಿತರಿದ್ದರು.  

ಸುದ್ದಿ ಓದಿ