ಆಧುನಿಕ ಮೀನು ಮಾರುಕಟ್ಟೆಯ ನೂತನ ಕಟ್ಟಡ ಲೋಕಾರೆ್ಣ
ಇಂಡಿ: ಮೀನುಗಾರಿಕೆ ಉತ್ತೇಜನಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರಂತರವಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಮೀನುಗಾರಿಕೆ ಮಾಡಲು ಪ್ರೋತ್ಸಾಹಿಸುತ್ತಿವೆ. ಮೀನುಗಾರಿಕೆ ಮಾಡಲು ಆಸಕ್ತಿಯುಳ್ಳವರಿಗೆ ಸಬ್ಸೀಡಿ ಸಹ ನೀಡಲಾಗುತ್ತಿದ್ದು ಈ ಭಾಗದ ಜನರು ಕೃಷಿಯ ಜೊತೆಗೆ ಮೀನುಗಾರಿಕೆಯನ್ನು ಸಹ ಮಾಡಿ ಆರ್ಥಿಕವಾಗಿ ಸಬಲರಾಗಬೇಕು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಹೇಳಿದರು.
ಶುಕ್ರವಾರ ಪಟ್ಟಣದ ಹಂಜಗಿ ರಸ್ತೆಯಲ್ಲಿ ನಿರ್ಮಾಣಗೊಂಡ ಆಧುನಿಕ ಮೀನು ಮಾರುಕಟ್ಟೆಯ ನೂತನ ಕಟ್ಟಡವನ್ನು ಲೋಕಾರೆ್ಣಗೊಳಿಸಿ ಅವರು ಮಾತನಾಡಿದರು.
ನೈಸರ್ಗಿಕವಾಗಿ ದೊರೆಯುವ ಮೀನಿಗೆ ಹೆಚ್ಚು ಶ್ರಮ ಪಡುವ ಅವಶ್ಯಕತೆ ಇಲ್ಲ. ಆದರೆ ಕೃತಕವಾಗಿ ಬೆಳೆಯುವ ಮೀನಿನ ಉತ್ಪನ್ನಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಕಷ್ಟು ಪ್ರಮಾಣದಲ್ಲಿ ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆ ಸೇರಿದಂತೆ ಇನ್ನಿತರ ಯೋಜನೆಗಳಿಂದ ಉತ್ತೇಜನ ನೀಡುತ್ತಿವೆ ಎಂದರು.
ಮೀನುಗಾರಿಕೆ ಬದುಕಿನ ಆರ್ಥಿಕತೆ ಜೊತೆ ಜೋಡಿಸಿಕೊಳ್ಳುವ ವಿಧಾನದಂತೆ ಮಾಡಿಕೊಳ್ಳಬೇಕು. ಹೊರನಾಡುವಿನಲ್ಲಿ 480 ಸಾವಿರ ಮೆಟ್ರಿಕ ಟನ್ ಮೀನು ಉತ್ಪಾದನೆಯಾಗಿ 4 ಸಾವಿರ ಕೋಟಿ ರೂ ಆದಾಯ ಬರುತ್ತಿದೆ. ಕರಾವಳಿಯಲ್ಲಿ 580 ಸಾವಿರ ಮೆಟ್ರಿಕ್ ಟನ್ ಮೀನು ಉತ್ಪಾದನೆಯಿಂದ 6705 ಕೋಟಿ ರೂ ಆದಾಯ ಬರುತ್ತಿದ್ದು ವಿಜಯಪುರ ಭಾಗದ ಜನರು ಮೀನಿನ ಕೃಷಿಗೆ ಆಸಕ್ತಿ ತೋರುವ ಜೊತೆಗೆ ಮೀನಿನ ಕೃಷಿ ಗುಣಮಟ್ಟ ಕಾಪಾಡುವದು ಅವಶ್ಯವಿದೆ. ಮೀನು ಕೇವಲ ಆರು ಗಂಟೆಯಲ್ಲಿಯೇ ಮಾರಾಟ ಮಾಡುವ ವ್ಯವಸ್ಥೆ ಇತ್ತು. ಈಗ ಮೀನು ಒಂದು ವರ್ಷದ ವರೆಗೆ ಇಡುವ ವ್ಯವಸ್ಥೆ ಇದೆ. ಎಂದ ಅವರು ಮೀನು ಕೃಷಿಗೆ ಸರಕಾರ 25 ಲಕ್ಷ ರೂ ವರೆಗೆ ಸಹಾಯ ಮಾಡುತ್ತಿದ್ದು, ಅದರಲ್ಲಿ ಮಹಿಳೆಯರಿಗೆ ಮತ್ತು ಪ.ಜಾ,ಪ.ಪಂಗಡದವರಿಗೆ ಶೇ 60 ಮತ್ತು ಸಾಮಾನ್ಯರಿಗೆ ಶೇ 40 ರಷ್ಟು ಸಹಾಯಧನ ನೀಡುತ್ತಿದೆ ಎಂದರು.
ಮೀನಿನ ವೇಸ್ಟ ಪದಾರ್ಥಗಳಿಂದ ಬಯೋ ಡಿಸೈಲ ಘಟಕ ಮಾಡಬಹುದು, 4000 ಚದುರು ಅಡಿ ಜಾಗದಲ್ಲಿ 5 ಲಕ್ಷ ರೂ ಉತ್ಪಾದನೆ ಮಾಡಿದ ರೈತರಿದ್ದಾರೆ ಎಂದರು.
ಒಂದು ವರ್ಷದಲ್ಲಿ ಎರಡು ಇಳುವರಿ ಪಡೆಯುವ ಕ್ರಮಗಳಿದ್ದು ಅದರ ಮಾಹಿತಿ ಇಲಾಖೆಯಿಂದ ಸಂಗ್ರಹಿಸಿ ಲಾಭ ಪಡೆದುಕೊಳ್ಳಲು ತಿಳಿಸಿದರು. ಆಲಮಟ್ಟಿಯಲ್ಲಿ 25 ಎಕರೆ ಜಾಗದಲ್ಲಿ ಮೀನಿನ ಮರಿ ಉತ್ಪಾದನೆ ಮಾಡುವ ಯೋಜನೆ ಇದೆ. ಈ ಭಾಗದಲ್ಲಿಯೇ ಮರಿ ಉತ್ಪಾದನೆಯಾದರೆ ಈ ಭಾಗದಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ. ರಾಜ್ಯದಲ್ಲಿ ಈಗ 60 ಕೋಟಿ ಮೀನಿನ ಮರಿಗಳ ಬೇಡಿಕೆ ಇದ್ದು 40 ಕೋಟಿ ಮರಿಗಳು ನಮ್ಮಲ್ಲೇ ಉತ್ಪಾದನೆಯಾಗುತ್ತಿದ್ದು 20 ಕೋಟಿ ಮರಿಗಳನ್ನು ನೆರೆಯ ರಾಜ್ಯಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದ ಅವರು ಜಗತ್ತಿನಲ್ಲಿ ಮೀನುಗಾರಿಕೆಯಲ್ಲಿ ಭಾರತ ಪ್ರಥಮ ಸ್ಥಾನಕ್ಕೆ ಮತ್ತು ಕರ್ನಾಟಕ ಭಾರತದಲ್ಲಿ ಪ್ರಥಮ ಸ್ಥಾನಕ್ಕೆ ಬರುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ತಾಪಮಾನ ಹೆಚ್ಚಿಗೆ ಇದ್ದು, ಇಲ್ಲಿ ಮೀನು ಸಾಗಾಣಿಕೆಗೆ ಶೀತಲ ಘಟಕದ ಅವಶ್ಯಕತೆ ಇದೆ. ಅದಕ್ಕೆ ಪೂರಕ ಸ್ಥಳ ನೀಡುವುದಾಗಿ ತಿಳಿಸಿ ಸ್ಟೇಶನ್ ರಸ್ತೆಯಲ್ಲಿಯೇ ರೈತರಿಗೆ ಅವಶ್ಯವಿರುವ ಎಲ್ಲ ಇಲಾಖೆಗಳನ್ನು ಒಂದೇ ಕಡೆ ನಿರ್ಮಿಸಿ ರೈತರಿಗೆ ಅನುವು ಕಲ್ಪಿಸಲಾಗುವುದು ಎಂದ ಅವರು ಮುಂದೆ ಇಂಡಿ ನಗರ ಜಿಲ್ಲಾಕೇಂದ್ರ ಆಗುವ ಎಲ್ಲ ಲಕ್ಷಞಣಗಳಿವೆ ಎಂದರು.
ನಿಂಬೆ ಅಭಿವೃದ್ಧಿ ಮಂಡಳದ ಅಧ್ಯಕ್ಷ ಚಂದ್ರಶೇಖರ ಕವಟಗಿ, ಮೀನುಗಾರಿಕೆ ನಿರ್ದೇಶಕ ರಾಮಾಚಾರ್ಯ, ಮೀನುಗಾರಿಕೆ ವ್ಯವಸ್ಥಾಪಕ ನಿರ್ದೇಶಕ ದಿನೇಶ ಕುಮಾರ ಕಳ್ಳೆರ ಮಾತನಾಡಿದರು. ವೇದಿಕೆಯ ಮೇಲೆ ಪುರಸಭೆ ಅಧ್ಯಕ್ಷೆ ಬನ್ನೆಮ್ಮ ಹದರಿ, ತಹಸೀಲ್ದಾರ ನಾಗಯ್ಯ ಹಿರೇಮಠ ಇದ್ದರು.