ಇಂಡಿ

ಧರ್ಮದ ಉಳಿವಿಗಾಗಿ ಕಂಕಣಬದ್ಧರಾಗಲು ಮಕ್ಕಳನ್ನು ಪ್ರೇರೇಪಿಸಿ : ಬಾಲವಾಗ್ಮಿ ಹಾರಿಕಾ ಮಂಜುನಾಥ ಕರೆ: ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘದ ವಾರ್ಷಿಕೋತ್ಸವ, ಛ.ಶಿವಾಜಿ ಮಹಾರಾಜರ ಜಯಂತಿ

ಧರ್ಮದ ಉಳಿವಿಗಾಗಿ ಕಂಕಣಬದ್ಧರಾಗಲು ಮಕ್ಕಳನ್ನು ಪ್ರೇರೇಪಿಸಿ : ಬಾಲವಾಗ್ಮಿ ಹಾರಿಕಾ ಮಂಜುನಾಥ ಕರೆ: ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘದ ವಾರ್ಷಿಕೋತ್ಸವ, ಛ.ಶಿವಾಜಿ ಮಹಾರಾಜರ ಜಯಂತಿ

ಲೋಕದರ್ಶನ ವರದಿ 


ಇಂಡಿ 02: ಹಿಂದೂಗಳನ್ನು ಒಗ್ಗೂಡಿಸಲು ವಿವಿಧ ಹಿಂದೂಪರ ಸಂಘಟನೆಗಳು ಹತ್ತಾರು ವರ್ಷಗಳಿಂದ ಹೋರಾಟ, ಪ್ರತಿಭಟನೆ, ಮುಂತಾದ ವೇದಿಕೆಗಳನ್ನು ನಿರ್ಮಿಸಿ ಪ್ರಯತ್ನಿಸಿದರೂ ನಮ್ಮ ಹಿಂದೂ ಸಮಾಜ ಒಗ್ಗಟ್ಟಾಗಿರಲಿಲ್ಲ. ಆದರೆ ಆರು ಜನ ಹಿಜಾಬ್ ಧರಿಸಿ ಬಂದ ಯುವತಿಯರಿಂದ, ಮತ್ತು ಕಾಲೇಜೊಂದರ ಮುಂದೆ ಅಲ್ಲಾ ಹೋ ಅಕ್ಬರ್ ಎಂದು ಕೂಗಿದ ವಿದ್ಯಾರ್ಥಿನಿಯಿಂದ ನಮ್ಮ ಹಿಂದೂ ಸಮಾಜ ಅತೀ ವೇಗವಾಗಿ ಒಗ್ಗೂಡಿದೆ ಎಂದು ಬಾಲವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು. 

ಅವರು ಸೋಮವಾರ ಸ್ವಾಮಿ ವಿವೇಕಾನಂದರ ವೃತ್ತದಲ್ಲಿ ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘದ ಪ್ರಥಮ ವಾರ್ಷಿಕೋತ್ಸವ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಭಾರತವು ಒಂದು ಸನಾತನ ದೇಶ ಇದು ಹಿಂದುಸ್ಥಾನ. ಭಾರತದಲ್ಲಿ ಹಿಂದೂ ಧರ್ಮದ ವಿಕಾಸವಾಗಬೇಕು. ಎದುರಿನವರು ಅಬ್ದುಲ್ ಕಲಾಂ ಆಗಿ ಬಂದರೆ ನಾವು ಶ್ರೀರಾಮ ಆಗುತ್ತೇವೆ, ನೀವು ಅಪ್ಜಲ್‌ಗುರು ಆಗಿ ಬಂದರೆ ನಾವು ಮನೆಗೊಬ್ಬ ಛತ್ರಪತಿ ಶಿವಾಜಿಯಾಗಿ ಬರುತ್ತೇವೆ ಎಂದು ರಾಷ್ಟ್ರ ದ್ರೋಹಿಗಳಿಗೆ ಎಚ್ಚರಿಕೆ ನೀಡಿದರು. 

ಭಾರತ ಭೂಮಿ ಅನಾದಿಕಾಲದಿಂದಲೂ ಅನೇಕ ಬಲಿಷ್ಠ, ಧೈರ್ಯವಂತ, ವೀರ ಯೋಧರು, ಸಾಹಸಿ ವನಿತೆಯರು, ಆಡಳಿತಗಾರರನ್ನು ಹೊಂದಿದೆ. ತಮ್ಮ ತಾಯ್ನಾಡು ಸ್ವರಾಜ್ಯವನ್ನು ರಕ್ಷಿಸಲು ಅದೆಷ್ಟೋ ಮಂದಿ ತಮ್ಮ ಪ್ರಾಣವನ್ನೇ ತ್ಯಜಿಸಿದ್ದಾರೆ. ಅಂತಹ ಮಹಾನ್ ಧೈರ್ಯಶಾಲಿ ಯೋಧರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಕೂಡ ಒಬ್ಬರಾಗಿದ್ದರು ಎಂದರು. 

ಶಿವಾಜಿ ಮಹಾರಾಜರು ಹಿಂದೂ ಧರ್ಮದ ರಕ್ಷಣೆಯ ಪಣ ತೊಟ್ಟಿದ್ದರು. ಇಸ್ಲಾಂ ಮತದ ವೈರಿಗಳೆಂದು ಇದರರ್ಥವಲ್ಲ. ಅವರೆಂದೂ ಕುರಾನನ್ನು ಅವಮಾನಿಸಲಿಲ್ಲ. ಯಾವ ಮಸೀದಿಯನ್ನೂ ಕೆಡವಲಿಲ್ಲ. ಯಾವ ಫಕೀರನನ್ನೂ ಗಲ್ಲಿಗೇರಿಸಲಿಲ್ಲ. ಆದರೆ ಹಿಂದೂ ಧರ್ಮದ ಮೇಲೆ ಘಾತವೆಸಗಿದ್ದು ಕಂಡರೆ, ಅವನನ್ನೆಂದೂ ಬಿಡುತ್ತಿರಲಿಲ್ಲ. ಇಂದಿನ ಮಕ್ಕಳಿಗೆ ಮನೆಯಲ್ಲಿ ತಾಯಂದಿರು ಭಗವದ್ಗೀತೆ ನೀಡಿ ಓದಿಸಬೇಕು. ಧರ್ಮದ ಉಳಿವಿಗಾಗಿ ಕಂಕಣಬದ್ಧರಾಗಲು ಪ್ರೇರೇಪಿಸಬೇಕು. ನಮ್ಮ ಹಿಂದೂ ಧರ್ಮ ನಶಿಸಲು ಸಾಧ್ಯವೇ ಇಲ್ಲ. 1500 ವರ್ಷಗಳಿಂದ ಭಾತರದ ಮೇಲೆ ಸಾಕಷ್ಟು ದಾಳಿ ನಡೆದರೂ ಸಹ ನಮ್ಮ ಧರ್ಮ ಇನ್ನೂ ಹಿಂದೂ ಧರ್ಮವಾಗೇ ಉಳಿದಿದೆ. ಆದರೆ ಅನೇಕ ರಾಷ್ಟ್ರಗಳ ಮೇಲೆ ಒಂದೊಂದೇ ದಾಳಿ ನಡೆದರೂ ಇಡೀ ರಾಷ್ಟ್ರ, ಇಸ್ಲಾಂ, ಕ್ರೈಸ್ತ, ಸೇರಿದಂತೆ ಇನ್ನಿತರ ಧರ್ಮದ ದೇಶವಾಗಿ ಬದಲಾಗಿವೆ ಎಂದರು. 

ಸ್ವಾಮಿ ವಿವೇಕಾನಂದ ಸೈನ್ಯದ ರಾಜ್ಯಾಧ್ಯಕ್ಷ ರಾಘವ ಅಣ್ಣಿಗೇರಿ, ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಮಾತನಾಡಿ ದೇಶದ್ರೋಹಿಗಳ ವಿರುಧ್ಧ ಮಾತಾಡುವುದು ಹಿಂದೂಪರ ಸಂಘಟನೆಗಳ  ಕೆಲಸ. ನಾವೇನೂ ದೇಶದ್ರೋಹದ ಕೆಲಸ ಮಾಡುತ್ತಿಲ್ಲ. ದೇಶದ್ರೋಹಿಗಳ ವಿರುಧ್ಧ ಮಾತನಾಡುತ್ತಿದ್ದೇವೆ. ಇಸ್ಲಾಮಿಕ್ ಟೆರರಿಸ್ಟ ದೇಶಗಳಿಂದ ಭಾರತಕ್ಕೆ ಅಕ್ರಮ ಹಣ ಬರುತ್ತಿದೆ. ಈ ದೇಶದ ಇಸ್ಲಾಂ ಬಾಂಧವರಿಗೆ ಹಣದ ಆಮಿಷವೊಡ್ಡಿ ದೇಶದ್ರೋಹದ ಕೆಲಸ ಮಾಡುವಂತೆ ಪ್ರಚೋದನೆ ನಡೆಸುತ್ತಿದೆ. ಈ ಕುರಿತು ಹಣದ ಮೂಲ ಪತ್ತೆ ಮಾಡಬೇಕು. ಅಂದಾಗ ಮಾತ್ರ ದೇಶದ್ರೋಹದ ಕೆಲಸಗಳು, ಮತಾಂತರಗಳು ನಿಲ್ಲುತ್ತವೆ ಎಂದರು. 

ಉತ್ತರ ಪ್ರದೇಶಧ ಯೋಗಿ ಆದಿತ್ಯನಾಥರಂತಹ ನಾಯಕರು ಕರ್ನಾಟಕಕ್ಕೆ ಬೇಕಾಗಿದ್ದಾರೆ. ಇಲ್ಲಿ ಕೇವಲ 6.5 ಕೋಟಿ ಜನ ಇದ್ದೇವೆ ಹಿಂದೂಪರ ಸಂಘಟನೆಗಳ 25ಕ್ಕಿಂತ ಹೆಚ್ಚು ಕಾರ್ಯಕರ್ತರ ಹತ್ಯೆಯಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ 20 ಕೋಟಿ ಜನಸಂಖ್ಯೆ ಇದ್ದರೂ ಒಬ್ಬನೇ ಒಬ್ಬ ಕಾರ್ಯಕರ್ತನ ಹತ್ಯೆ ನಡೆದಿಲ್ಲ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಲ್‌.ಕೆ. ರಾಮಪ್ಪ ವಹಿಸಿದ್ದರು. 

ವೇದಿಕೆಯಲ್ಲಿ  ಮಾಜಿ ಶಾಸಕ ಸಾರ್ವಭೌಮ ಬಗಲಿ, ಬಿಜೆಪಿ ರೈತ ಮೊರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಸಾಗರ ಪಾಟೀಲ, ಬಿಜೆಪಿ ಜಿಲ್ಲಾ ಮುಖಂಡ ಶ್ರೀಶೈಲಗೌಡ ಬಿರಾದಾರ, ಜೆಡಿಎಸ್ ಮುಖಂಡರಾದ ವಿಜಯಕುಮಾರ ಬೋಸಲೆ, ಮರೆಪ್ಪ ಗಿರಣಿವಡ್ಡರ, ಸೇರಿದಂತೆ ಅನೆಕರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಸಂಘದ ಅಧ್ಯಕ್ಷ ರಾಜಗುರು ದೇವರ, ಉಪಾಧ್ಯಕ್ಷ ಪ್ರತೀಕ ಬೇವನೂರ, ಕಾರ್ಯದರ್ಶಿ ಶಂಕರಸಿಂಗ ಹಲವಾಯಿ, ಸ್ವಸ್ಥಿಕ್ ಗಳೇದ, ಆನಂದ ದೇವರ, ಸ್ವರೂಪ ಸಿಂಧೆ, ಶಿವಲಿಂಗಪ್ಪ ಸಿಂದಗಿ, ಪ್ರತೀಕ ಬಿರಾದಾರ, ಶರಣಬಸಪ್ಪ ವಾಗೆ, ಅಕ್ಷಯ್ ಪಾಟೀಲ, ಅನೀಲ ರಾಠೋಡ, ಕಿರಣ ಮಹೆಂದ್ರಕರ, ಸಚಿನ್ ಗಿರಣಿವಡ್ಡರ ಸೇರಿದಂತೆ ಸಾವಿರಾರು ಜನ ಉಪಸ್ಥಿತರಿದ್ದರು. 


ಸುದ್ದಿ ಓದಿ