ರಾಜ್ಯದ 100 ದೇವಾಲಯಗಳಲ್ಲಿ ಸಾಮೂಹಿಕ ವಿವಾಹ; ಶ್ರೀನಿವಾಸ್ ಪೂಜಾರಿ
ಬಳ್ಳಾರಿ, ನ 6: ರಾಜ್ಯದ ಎ ದರ್ಜೆಯ 100 ದೇವಾಲಯಗಳಲ್ಲಿ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವುದಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎ ದರ್ಜೆಯ 190 ದೇವಾಲಯಗಳ ಪೈಕಿ 100 ದೇವಾಲಯಗಳಲ್ಲಿ ಸಾಮೂಹಿಕ ವಿವಾಹನಗಳನ್ನು ಆಯೋಜಿಸಲಾಗುವುದು. ಜನರು ದೇವಾಲಯಗಳಲ್ಲಿ ವಿವಾಹವಾಗುವುದು ಶ್ರೇಷ್ಠ ಎಂಬ ನಂಬಿಕೆ ಹೊಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಇರುವುದರಿಂದ ಕನಿಷ್ಠ ಒಂದು ಸಾವಿರ ಜೋಡಿಯ ಮದುವೆಯಾಗುವ ನಿರೀಕ್ಷೆ ಇದೆ ಎಂದರು. ಸಾಮೂಹಿಕ ಮದುವೆಯಲ್ಲಿ ವಧುವಿಗೆ 40 ಸಾವಿರ ರೂ. ಮೌಲ್ಯದ ಮಾಂಗಲ್ಯ ಸರ ಹಾಗೂ 10 ಸಾವಿರ ನಗದು ನೀಡಲಾಗುವುದು ಎಂದರು. ಆಡಿಯೋ ಮುಗಿದ ಅಧ್ಯಾಯ ಹುಬ್ಬಳ್ಳಿ ಬಿಜೆಪಿ ಆಂತರಿಕ ಸಭೆಯಲ್ಲಿ ಅನರ್ಹ ಶಾಸಕರ ಪರವಾಗಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಿಯೋ ಕುರಿತು ಪ್ರತಿಕ್ರಿಯಿಸಿದ ಪೂಜಾರಿ, ಯಡಿಯೂರಪ್ಪನವರ ಆಡಿಯೋ ಮುಗಿದ ಅಧ್ಯಾಯ. ದೇವೇಗೌಡರು ಅವರಿಗೆ ಕರೆ ಮಾಡಿ ಮಾತನಾಡಿರುವುದಕ್ಕೆ ಹೆಚ್ಚಿನ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಹಿರಿಯರಾಗಿ ಗೌಡರು ಶುಭ ಕೋರಿರಬಹುದು. ಸರ್ಕಾರಕ್ಕೆ ಜೆಡಿಎಸ್ ಬಾಹ್ಯ ಬೆಂಬಲ ನೀಡುವ ಬಗ್ಗೆ ಗೊತ್ತಿಲ್ಲ ಎಂದರು.