ಮಕ್ತಬ್ (ಮದರಸಾ) ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ
ವಿಜಯಪುರ 17 : ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಬಹಳ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಮಕ್ತಬ್ ತಜವಿಜುಲ್ ಕುರಾನ್ (ಮದರಸಾ) ಶಿಕ್ಷಣ ಬಹಳ ಪೂರಕವಾಗಿದೆ ಎಂದು ಕಾಂಗ್ರೇಸ್ ಹಿರಿಯ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಅವರು ಹೇಳಿದರು. ನಗರದ ಮನಗೂಳಿ ಆಗಸಿ ಹತ್ತಿರವಿರುವ ಪತ್ಹೆ ದರ್ವಾಜಾ ಮಜ್ಜಿದ ಆವರಣದಲ್ಲಿ ನಡೆದ ಮಕ್ತಬ್ (ಮದರಸಾ) ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಈ ಕಾರ್ಯಕ್ರಮವು ಮಕ್ಕಳಲ್ಲಿ ಆತ್ಮವಿಶ್ವಾಸ, ಧೈರ್ಯ, ಉತ್ತಮ ನಡವಳಿಕೆ ಹಾಗೂ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಮತ್ತಷ್ಟು ಬೆಳೆಸುವ ಮಹತ್ವದ ವೇದಿಕೆಯಾಗಿದೆ ಎಂದು ಹೇಳಿದರು.
ಶಾಲೆಗೆ ತೆರಳುವ ಮಕ್ಕಳಿಗೆ ಬೆಳಿಗ್ಗೆ ಅಥವಾ ಮಧ್ಯಾಹ್ನದ ಶಾಲೆಯ ಬಿಡುವಿನ ಸಮಯದಲ್ಲಿ ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರ್ಆನ್ ಪಠಣ, ಇಸ್ಲಾಮಿಕ್ ಶಿಕ್ಷಣ ಹಾಗೂ ನೈತಿಕ ಮೌಲ್ಯಗಳನ್ನು ಬೋಧಿಸುವ ಮೂಲಕ ಮಕ್ಕಳಲ್ಲಿ ಉತ್ತಮ ಗುಣಗಳು, ಶಿಸ್ತು, ಸಂಸ್ಕಾರ, ಮಾನವೀಯತೆ ಮತ್ತು ಧಾರ್ಮಿಕ ಜಾಗೃತಿಯನ್ನು ಬೆಳೆಸುವ ಉದ್ದೇಶದಿಂದ ಮಕ್ತಬ್ ತಜವಿಜುಲ್ ಕುರಾನ್ (ಮದರಸಾ) ಶಿಕ್ಷಣ ನೀಡಲಾಗುತ್ತದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಈ ಮಕ್ತಬ್ನಲ್ಲಿ ವರ್ಷವೀಡೀ ಕಲಿತಿರುವ ಕುರ್ಆನ್ ಪಠಣ, ಧಾರ್ಮಿಕ ಜ್ಞಾನ, ಪ್ರಾರ್ಥನೆಗಳು, ಇಸ್ಲಾಮಿಕ್ ಸಂಸ್ಕಾರಗಳು ಹಾಗೂ ನೈತಿಕ ಮೌಲ್ಯಗಳ ಕುರಿತು ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಕಲಿಕೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ವಾರ್ಷಿಕ ಸಮಾರಂಭವನ್ನು ಆಯೋಜಿಸಲಾಗುತ್ತದೆ.
ಇದು ಪ್ರಶಂಸನೀಯ ಸಂಗತಿಯಾಗಿದೆ. ಇದರಿಂದ ಮಕ್ಕಳ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಾಗುತ್ತದೆ ಎಂದರು. ಬಳಿಕ ಪತ್ರಕರ್ತ ಇರ್ಫಾನ್ ಶೇಖ್ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಇಂದು ಎಲ್ಲರೂ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದು, ಭಾರತೀಯ ಕುಟುಂಬ ವ್ಯವಸ್ಥೆಯ ಮೌಲ್ಯಗಳು ಉಳಿದು ಬೆಳೆಯಲು ಮಕ್ಕಳಿಗೆ ಮಕ್ತಬ್ ತಜವಿಜುಲ್ ಕುರಾನ್ (ಮದರಸಾ) ಶಿಕ್ಷಣ ಸಹಕಾರಿಯಾಗಿದೆ ಎಂದು ತಿಳಿಸಿದರು. ಇದೇ ವೇಳೆ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಮೌಲಾನಾ, ರೌಫ್ ಕಾಖಂಡಕಿ, ಅಲ್ತಾಫ್ ಲಕ್ಕುಂಡಿ, ಮಸ್ತಾನ್ ನಜರಿ, ಮುದಢಸರ ಖುರೇಸಿ, ಸಲೀಂ ಇನಾಮದಾರ ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು, ಗುರುಗಳು, ಮಕ್ಕಳು, ಪಾಲಕರು ಉಪಸ್ಥಿತರಿದ್ದರು.