ವಿಜಯಪುರ

ಆರ್‌.ಎಸ್‌. ಪ್ಯಾಟಿಗೌಡ್ರಗೆ ಬಿಜೆಪಿ ಟಿಕೆಟ್ ನೀಡುವಂತೆ ದೇವಾಂಗ ಸಮಾಜ ಮನವಿ

ಆರ್‌.ಎಸ್‌. ಪ್ಯಾಟಿಗೌಡ್ರಗೆ ಬಿಜೆಪಿ ಟಿಕೆಟ್ ನೀಡುವಂತೆ ದೇವಾಂಗ ಸಮಾಜ ಮನವಿ


           ಕೊಲ್ಹಾರ 17 : ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಿಡಗುಂದಿ ತಾಲೂಕಿನ ಗೊಳಸಂಗಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಅನ್ನು ದೇವಾಂಗ ಸಮಾಜದ ಮುಖಂಡ ಆರ್‌.ಎಸ್‌. ಪ್ಯಾಟಿಗೌಡ್ರ ಅವರಿಗೆ ನೀಡಬೇಕು ಎಂದು ವಿಜಯಪುರ ಜಿಲ್ಲಾ ದೇವಾಂಗ ಸಮಾಜ ಒತ್ತಾಯಿಸಿದೆ. ಪಟ್ಟಣದಲ್ಲಿರುವ ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ ಅವರ ನಿವಾಸಕ್ಕೆ ರಾಜ್ಯ ದೇವಾಂಗ ಸಂಘದ ಸಂಘಟನಾ ಕಾರ್ಯದರ್ಶಿ ಆನಂದ ಹುಲಿಮನಿ ನೇತೃತ್ವದಲ್ಲಿ ಭೇಟಿ ನೀಡಿದ ನೇಕಾರ ಪ್ರಮುಖರು, ಈ ಕುರಿತು ಮನವಿ ಸಲ್ಲಿಸಿದರು.

           ನೇಕಾರರಿಗೆ ಪ್ರಾತಿನಿಧ್ಯ ನೀಡಿ:"ಬಸವನ ಬಾಗೇವಾಡಿ ಮತಕ್ಷೇತ್ರದ ವ್ಯಾಪ್ತಿಯ ಗೊಳಸಂಗಿ ಜಿಪಂ ಕ್ಷೇತ್ರವು ಹಿಂದುಳಿದ ವರ್ಗದ (2ಎ) ಮೀಸಲಾತಿಗೆ ಒಳಪಟ್ಟಿದೆ. ಈ ವರ್ಗದಲ್ಲಿ ನೇಕಾರ ಸಮುದಾಯವಿದ್ದರೂ, ಇದುವರೆಗೆ ರಾಜಕೀಯವಾಗಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ದೇವಾಂಗ ಸಮಾಜದ ಜಿಲ್ಲಾ ಉಪಾಧ್ಯಕ್ಷ ಹಾಗೂ ನಿಸರ್ಗ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಆರ್‌.ಎಸ್‌. ಪ್ಯಾಟಿಗೌಡ್ರ ಸದಾ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

            ಎಲ್ಲ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅವರಿಗೆ ಟಿಕೆಟ್ ನೀಡಿದರೆ, ಜಿಲ್ಲೆಯ ಇಡೀ ದೇವಾಂಗ ಸಮಾಜ ಒಗ್ಗಟ್ಟಾಗಿ ನಿಂತು ಗೆಲುವಿಗೆ ಶ್ರಮಿಸಲಿದೆ" ಎಂದು ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.ಬೆಳ್ಳುಬ್ಬಿ ಭರವಸೆ:ಮನವಿ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ, "ಪ್ಯಾಟಿಗೌಡ್ರ ಅವರಿಗೆ ಟಿಕೆಟ್ ನೀಡುವ ವಿಚಾರವನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದ ಪಕ್ಷದ ಕೋರ್ ಕಮಿಟಿಯಲ್ಲಿ ಪ್ರಸ್ತಾಪಿಸಿ, ಟಿಕೆಟ್ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ" ಎಂದು ಭರವಸೆ ನೀಡಿದರು.ಟಿಕೆಟ್ ಆಕಾಂಕ್ಷಿ ಆರ್‌.ಎಸ್‌. ಪ್ಯಾಟಿಗೌಡ್ರ, ವಂದಾಲದ ಗುರುಪಾದ ಹಟ್ಟಿ, ಬಿಜೆಪಿ ಒಬಿಸಿ ಘಟಕದ ಮುಖಂಡ ಈರಣ್ಣ ಬಳವಾಟ, ಶ್ರೀಶೈಲ ಜುಮನಾಳ ಸೇರಿದಂತೆ ಸಮಾಜದ ಪ್ರಮುಖರು ಹಾಜರಿದ್ದರು. 


ಸುದ್ದಿ ಓದಿ