ಇಂದಿನ ಮಕ್ಕಳೇ ಇಂದಿನ ಪ್ರಜೆಗಳು : ನ್ಯಾಯವಾದಿ ದಾನೇಶ ಅವಟಿ
ಲೋಕದರ್ಶನ ವರದಿ
ವಿಜಯಪುರ 17 : ಇಂದಿನ ಮಕ್ಕಳು ನಾಳಿನ ಪ್ರಜೆಗಳು ಎನ್ನುವ ಕಾಲವೋಂದಿತ್ತು. ಆದರೆ ಇಂದು ಕಾಲ ಮತ್ತು ಕಾನೂನುಗಳು ಬದಲಾಗಿದ್ದು ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಎನ್ನುವ ಕಾಲ ಇದಾಗಿದೆ. ಕಾರಣ ಮಕ್ಕಳಿಗೆ ಸೂಕ್ತ ವಾತಾವರಣ, ಅವಕಾಶ, ಹಕ್ಕುಗಳನ್ನು ಕಲ್ಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ನ್ಯಾಯವಾದಿ ದಾನೇಶ ಅವಟಿ ಅಭಿಪ್ರಾಯಪಟ್ಟರು. '
ನಗರದ ಹೊರವಲಯ ಬುರಣಾಪುರ ರಸ್ತೆಯ ಗಾಂಧಿಗರದ ಸಿಸ್ಟರ್ ನಿವೇದಿತಾ ಪಬ್ಲಿಕ್ ಶಾಲೆಯಲ್ಲಿ ಪಂಡಿತ ಜವಾಹರಲಾಲ್ ನೆಹರು ಅವರ ಜನ್ಮ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಿಗೆ ಜೀವಿಸುವ, ಅಭಿವೃದ್ಧಿ ಹೊಂದುವ, ರಕ್ಷಣೆಯ ಹಕ್ಕುಗಳಿದ್ದರೂ ಅವುಗಳ ಸರಿಯಾದ ಪಾಲನೆಯಿಲ್ಲದೆ ಮಕ್ಕಳು ತಮ್ಮ ಬಾಲ್ಯದಿಂದ ಹಾಗೂ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಬಡತನ, ಅಜ್ಞಾನ ಬಾಲ ಕಾರ್ಮಿಕತೆ, ಅನಕ್ಷರತೆ, ಮಾದಕ ವಸ್ತುಗಳು ವ್ಯಸನ, ಭಿಕ್ಷಾಟನೆಯಂಥ ಶೋಷಣೆಗೆ ಒಳಗಾಗುತ್ತಿದ್ದಾರೆ.
ಅವರ ರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲದೆ, ತಂದೆ ತಾಯಿ, ಪೋಷಕರು, ಸಮಾಜ ಮತ್ತು ಸಂಘ ಸಂಸ್ಥೆಗಳ ಪಾತ್ರ ಹಿರಿದಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಅವಟಿ ಮಾತನಾಡಿ, ಶಿಕ್ಷಣ ಎಂದರೆ ಕೇವಲ ಅಕ್ಷರ ಕಲಿಕೆಯಲ್ಲ, ಸಂಸ್ಕಾರ, ಸಂಸ್ಕೃತಿ, ಸಾಮಾಜಿಕ ಜವಾಬ್ದಾರಿ. ನಾಯಕತ್ವ ಗುಣಗಳನ್ನು ಬೆಳೆಸುವದೆ ಶಿಕ್ಷಣ. ದೇಶದ ಪ್ರತಿಯೊಂದು ಮಗು ಶಿಕ್ಷಣದಿಂದ ವಂಚಿತರಾಗಬಾರದು.
ದೇಶದ ಪ್ರಥಮ ಪ್ರಧಾನಿಯಾಗಿದ್ದ ಪಂಡಿತ ಜವಾಹರಲಾಲ್ ನೆಹರು ಅವರು ಮಕ್ಕಳ ಮೇಲೆ ವಿಶೇಷ ಪ್ರೀತಿ ಹಾಗೂ ಕಾಳಜಿ ಹೊಂದಿದ್ದರು. ಮಕ್ಕಳ ಶಿಕ್ಷಣ ಮತ್ತು ಹಕ್ಕುಗಳ ರಕ್ಷಣೆಗೆ ಭದ್ರ ಬುನಾದಿ ಹಾಕಿದರು. ಮಕ್ಕಳ ಮೇಲಿನ ಅವರ ಪ್ರೀತಿಗಾಗಿ ಅವರ ಜನ್ಮ ಜಯಂತಿಯನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲ್ಪಡುತ್ತಿರುವುದು ಹೆಮ್ಮೆಯ ವಿಷಯ ಎಂದರು. ಶಿಕ್ಷಕಿ ಯಾಸ್ಮಿನ್ ಪಠಾಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಿಸ್ಮಿಲ್ಲಾ ಮೋಪಗಾರ ವಂದಿಸಿದರು. ಮಕ್ಕಳ ಹಾಡು ನೃತ್ಯ, ಭಾಷಣ ಬಹುಮಾನ ವಿತರಣೆ, ಸಿಹಿ ಹಂಚಿಕೆಯೊಂದಿಗೆ ಕಾರ್ಯಕ್ರಮ ಸಡಗರ ಸಂಭ್ರಮದೊಂದಿಗೆ ಕೊನೆಗೊಂಡಿತು.