ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ: ಮದ್ದಿನ್
ಇಂಡಿ: ದಲಿತ ಸಮುದಾಯ ಶೈಕ್ಷಣಿಕವಾಗಿ ಅತೀ ಹಿಂದುಳಿದಿದ್ದು ಸಮುದಾಯವನ್ನು ಮುಂದುವರೆದ ಸಮುದಾಯ ಮಾಡಬೇಕೆಂದರೆ ಪ.ಜಾ ಪ.ಪಂ ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂದು ತಾ.ಪಂ ಮುಖ್ಯಕಾಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ್ ಹೇಳಿದರು.
ಅವರು ಸೋಮವಾರ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಗ್ರಾ.ಪಂ ವತಿಯಿಂದ ತಾ.ಪಂ ಸಹಯೋಗದಲ್ಲಿ ಅಂಬೇಡ್ಕರ ಭವನದಲ್ಲಿ ದಲಿತ ಸಮನ್ವಯ ಸಮೀತಿ ವತಿಯಿಂದ ಹಮ್ಮಿಕೊಂಡ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ದಲಿತ ಸಮಾಜದ ಯುವ ಉತ್ಸಾಹಿ ಯುವಕ ಶಿವು ಮೂರಮನ್ ಅವರು ಲಚ್ಯಾಣ ಗ್ರಾಮಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅನುದಾನದಲ್ಲಿ ಅಂಬೇಡ್ಕರ ಭವನದಲ್ಲಿ ಹೈಟೆಕ್ ಗ್ರಂಥಾಲಯ ಪ್ರಾರಂಭಿಸಲು ಮನವಿ ಮಾಡಿದ್ದು, ಅವರ ಮನವಿಯಂತೆ ಪ.ಜಾ ಪ.ಪಂ 25ಅ ಅನುದಾನದಲ್ಲಿ ಶೀಘ್ರವೇ ಗ್ರಂಥಾಲಯ ನಿರ್ಮಾಣದ ಜೊತೆಗೆ 4 ಕಂಪ್ಯೂಟರ್ ಸಹ ನೀಡಿ ದಲಿತ ಮಕ್ಕಳಿಗೆ ಅನುವು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ತಹಸೀಲ್ದಾರ ನಾಗಯ್ಯ ಹಿರೇಮಠ ಮಾತನಾಡಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಅಗತ್ಯ, ಈ ದಿಶೆಯಲ್ಲಿ ಶಿವಾನಂದ ಮೂರಮನರವರು ಗ್ರಂಥಾಲಯ ಕುರಿತು ಶ್ರಮ ವಹಿಸಿರುವದು ಶ್ಲಾಘನೀಯ ಎಂದರು.
ದಲಿತ ಸಮನ್ವಯ ಸಮಿತಿಯ ತಾಲೂಕಾ ಅಧ್ಯಕ್ಷ ಶಿವಾನಂದ ಮೂರಮನ ಮಾತನಾಡಿ ಲಚ್ಯಾಣ ಗ್ರಾಮದಲ್ಲಿ ಮೂರು ಮಾಧ್ಯಮಿಕ ಶಾಲೆ, ಒಂದು ಪದವಿಪೂರ್ವ, ಆಯ್.ಟಿ.ಆಯ್, ಒಂದು ಟಿ.ಟಿ.ಐ ಸೇರಿದಂತೆ ಇನ್ನಿತರ ವಿದ್ಯಾ ಸಂಸ್ಥೆಗಳಿದ್ದು ವಿದ್ಯಾರ್ಥಿಗಳಿಗೆ ಓದಲು ಅನುಕೂಲ ವಾಗಲಿ ಎಂದು ಗ್ರಂಥಾಲಯಕ್ಕೆ ಬೇಡಿಕೆ ಇಟ್ಟು ಸತತ ಪ್ರಯತ್ನದ ಪರಿಣಾಮ ಅಧಿಕಾರಿಗಳು ಸ್ಪಂದಿಸಿದ್ದು ಒಂದು ವಾರದಲ್ಲಿ ಗ್ರಂಥಾಲಯ ಪ್ರಾರಂಭಿಸುವ ವಿಶ್ವಾಸವಿದೆ ಎಂದರು.
ಗ್ರಾಮೀಣ ಪಿ.ಎಸ್.ಐ ಅಶೋಕ, ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ. ಇಂಡಿ, ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಆರ್.ನಡಗಡ್ಡಿ ಮಾತನಾಡಿ ಶಿವಾನಂದ ಮೂರಮನರಂತೆ ಯುವಕರು ಗ್ರಾಮೀಣ ಮಕ್ಕಳಿಗೆ ಶಿಕ್ಷಣದಲ್ಲಿ ಸಹಕರಿಸಲು ಮತ್ತು ಸಮಾಜ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಕೇಳಿಕೊಂಡರು.
ಪಿಡಿಓ ಪ್ರದೀಪಕುಮಾರ ಮಾನೆ, ಅಪ್ಪಾಶಾ ಕಾಂಬಳೆ, ಕಲ್ಲಪ್ಪ ದೊಡಮನಿ, ಸತೀಶ ಹರಿಜನ, ಸುನೀಲ ಬನಸೋಡೆ, ಸಚೀನ ಬನಸೋಡೆ, ಸಂತೋಷ ಮೇಲಿನಕೇರಿ, ಸಚಿನ ಹತ್ತಳ್ಳಿ, ಗೌತಮ ಬನಸೋಡೆ ಮತ್ತಿತರಿದ್ದರು.