ವಿದ್ಯಾರ್ಥಿಗಳು ಅನಕ್ಷರಸ್ಥರಲ್ಲೂ ಕಾನೂನು ಅರಿವು ಮೂಡಿಸಲಿ: ಉಷಾರಾಣಿ ಆರ್.
ಬೈಲಹೊಂಗಲ 13: ವಿದ್ಯಾರ್ಥಿಗಳು ಕಾನೂನು ಪ್ರಾಮುಖ್ಯತೆಯನ್ನು ಅರಿಯುವುದರ ಜೊತೆಗೆ ಅನಕ್ಷರಸ್ಥ ಜನರಲ್ಲಿ ಕೂಡ ಕಾನೂನು ಅರಿವು ಮೂಡಿಸುವುದು ಅವಶ್ಯ ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ಉಷಾರಾಣಿ ಆರ್ ಹೇಳಿದರು.
ಪಟ್ಟಣದ ವೀರರಾಣಿ ಚನ್ನಮ್ಮಾಜಿ ಸಮಾಧಿ ಎದುರಗಡೆ ತಾಲೂಕಾ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಪ್ಯಾನಲ್ ವಕೀಲರು ಹಾಗೂ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಇವರುಗಳ ಆಶ್ರಯದಲ್ಲಿ ಏರಿ್ಡಸಿದ್ದ ಕಾನೂನು ಅರಿವು, ನೆರವು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ನಾಗರಿಕರಲ್ಲಿ ಕಾನೂನು ಅರಿವಿನ ಕೊರತೆಯಿಂದಾಗಿ ಅಹಿತಕರ ಘಟನಗಳು ನಡೆಯುತ್ತಿದ್ದು, ಹೀಗಾಗಿ ಪ್ರತಿಯೊಬ್ಬರೂ ಕಾನೂನು ಬಗ್ಗೆ ಅರಿಯುವ ಅನಿವಾರ್ಯವಿದ್ದು, ಕಾನೂನು ಸೇವೆಗಳ ಪ್ರಾಧಿಕಾರದಿಂದ ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸಲಾಗುತ್ತಿದೆ ಎಂದರು.
ಪ್ರಧಾನ ನ್ಯಾಯಾಧೀಶ ಮನುಶರ್ಮಾ ಎಸ್.ಪಿ. ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿತ್ಯದ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲು ಕಾನೂನಿನ ಜ್ಞಾನ ಅವಶ್ಯಕವಾಗಿದೆ. ಕಾನೂನಿನ ಅರಿವಿನ ಕೊರತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪರಾಧಗಳು ನಡೆಯುತ್ತಿವೆ. ಹಿಂದುಳಿದವರು, ಅಂಗವಿಕಲರು, ಆರ್ಥಿಕ ಹಿಂದುಳಿದವರಿಗೆ ಕಾನೂನು ಸೇವೆಗಳ ಪ್ರಾಧಿಕಾರವು ಉಚಿತ ಕಾನೂನು ಸೇವೆಯ ನೆರವು ಒದಗಿಸಲಾಗುತ್ತಿದೆ. ಪ್ರತಿಯೊಬ್ಬರೂ ಕಾನೂನು ಪಾಲಿಸುವ ಮೂಲಕ ಉತ್ತಮ ಪ್ರಜೆಗಳಾಗಿ ಬಾಳೋಣ ಎಂದರು.
ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಯು.ಎಚ್.ಸಾತೇನಹಳ್ಳಿ, ಸರಕಾರಿ ಅಭಿಯೋಜಕ ಎಂ.ಎಸ್.ದೇಶಪಾಂಡೆ, ಸುನೀತಾ ಪಾಟೀಲ, ರಮೇಶ ಕೋಲಕಾರ, ಪೊಲೀಸ್ ಪೇದೆಗಳಾದ ಎಸ್.ಸಿ.ಕರವೀರನವರ, ಮಲ್ಲಪ್ಪ ಸಂಗಣ್ಣವರ, ಸಿದ್ರಾಮ ಕೌಜಲಗಿ, ಪ್ರಾಚಾರ್ಯ ಸಿ.ಬಿ.ಗಣಾಚಾರಿ, ಎಂ.ಎಸ್.ದೇಶಪಾಂಡೆ ಹಾಗೂ ನ್ಯಾಯವಾದಿಗಳು, ವಿದ್ಯಾರ್ಥಿಗಳು ಇದ್ದರು.