ಇಂಡಿ

ಕಾಲು-ಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ

ಕಾಲು-ಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ

ಇಂಡಿ: ಪಸುಪಾಲನಾ ಮತ್ತು ಕೆವಿಕೆ  ಇಲಾಖೆಯ 3ನೇ ಸುತ್ತಿನ ಕಾಲು-ಬಾಯಿ ರೋಗ ಲಸಿಕಾ ಅಭಿಯಾನಕ್ಕೆ ತಹಶೀಲ್ದಾರ ನಾಗಯ್ಯ ಹಿರೇಮಠ ಚಾಲನೆ ನೀಡಿದರು. 

ಸೋಮವಾರ ಪಟ್ಟಣದ ಪಶು ಆಸ್ಪತ್ರೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ, ಸಹಯೋಗದಲ್ಲಿ ಕಾಲು-ಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ತಾಲೂಕಿನಾದ್ಯಂತ ಜಾನುವಾರುಗಳಿಗೆ ಕಾಲು-ಬಾಯಿ ಜ್ವರ ಕಾಣಿಸಿಕೊಂಡಿದ್ದು, ರೈತರು ಪಶು ವೆದ್ಯಾಧಿಕಾರಿಗೆ ತಿಳಿಸಿ ಸರಿಯಾದ ಚಿಕಿತ್ಸೆ ಕೊಡಿಸಬೇಕು ಎಂದರು. 

ಡಾ. ಸಂತೋಷ ಶಿಂದೆ ಮಾತನಾಡಿ, ಕಾಲುಬಾಯಿ ರೋಗವು ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗ. ಈ ರೋಗ ಬಂದಲ್ಲಿ ರೈತರಿಗೆ ಆರ್ಥಿಕ ಸಂಕಷ್ಟವನ್ನು ಉಂಟುಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.  ಈ ರೋಗವನ್ನು ನಿಯಂತ್ರಿಸಿ ನಿರ್ಮೂಲನೆ ಮಾಡಲು ಪ್ರತಿ ಆರು ತಿಂಗಳಿಗೊಮ್ಮೆ ರೋಗದ ವಿರುದ್ದ ಲಸಿಕೆ ಹಾಕಿಸುವೊದೆಂದೆ ಮಾರ್ಗ. ಆದ್ದರಿಂದ, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ‌್ಯಕ್ರಮದಡಿಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ  ದನ, ಎಮ್ಮೆ ಮತ್ತು ಕರುಗಳಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತದೆ ಎಂದರು. 

ಸಹಾಯಕ ನಿರ್ದೇಶಕ ಪಶು ಪಾಲನಾ ಡಾ. ಬಿ.ಹೆಚ್‌. ಕನ್ನೂರ ಮಾತನಾಡಿ, ಇದು ಸಾಂಕ್ರಾಮಿಕ ರೋಗವಾಗಿದ್ದು, ಅತಿ ಬೇಗನೆ ಒಂದು ರಾಸಿನಿಂದ ಇನ್ನೊಂದಕ್ಕೆ ನೇರ ಸಂಪರ್ಕ ಹಾಗೂ ಗಾಳಿಯ ಮೂಲಕ ತುಂಬಾ ದೂರದವರೆಗೂ ಹರಡುತ್ತದೆ. ಜಾತ್ರೆಗಳಿಂದ ಬಂದ ರೋಗಗ್ರಸ್ತ ರಾಸುಗಳಿಂದ ಬೇರೆ ಬೇರೆ ಪ್ರದೇಶಗಳಿಗೆ ಶೀಘ್ರವಾಗಿ ಹರಡುತ್ತದೆ. ರೋಗಾಣುಗಳು ಕಲುಷಿತಗೊಂಡ ಮೇವು ಹಾಗೂ ನೀರಿನ ಮೂಲಕ ಹರಡುವ ಸಾಧ್ಯತೆ ಇದ್ದು, ರೋಗಗ್ರಸ್ತ ರಾಸಿನ ಮೂತ್ರ, ಸಗಣಿ, ವೀರ್ಯ ಹಾಗೂ ಹಾಲಿನ ಮುಖಾಂತರವೂ ಹರಡುತ್ತದೆ. ಕೆಲಸಗಾರರು ಹಾಗೂ ವಾಹನಗಳ ಮೂಲಕ ಹರಡುವ ಸಾಧ್ಯತೆ ಹೆಚ್ಚು. ಎಲ್ಲಾ ರೈತ ಭಾಂದವರು ಜಾನುವಾರಗಳಿಗೆ ಲಸಿಕೆಯನ್ನು ತಪ್ಪದೇ ಹಾಕಿಸಬೇಕು ಎಂದರು. 

ಮುಖ್ಯ ಪಶು ವೈದ್ಯಾಧಿಕಾರಿಗಳು ಡಾ. ರಾಜಕುಮಾರ ಅಡಕಿ ಮಾತನಾಡಿ, ರೋಗ ಕಂಡು ಬಂದ ತಕ್ಷಣ ರೋಗಗ್ರಸ್ತ ದನಗಳನ್ನು ಆರೋಗ್ಯವಂತ ದನಗಳಿಂದ ಬೇರಿ​‍್ಡಸಿ ರೋಗ ಹರಡದಂತೆ ನೋಡಿಕೊಳ್ಳಬೇಕು. ರೋಗಗ್ರಸ್ತ ರಾಸುಗಳ ಕಾಲು ಹಾಗೂ ಬಾಯಿ ಹುಣ್ಣನ್ನು ಶೇ. 0.5 ರಷ್ಟ್ರು ಸೋಡಿಯಂ ಕಾರ್ಬೋನೇಟ್ (ಅಡಿಗೆ ಸೋಡಾ) ದ್ರಾವಣದಿಂದ ದಿನಕ್ಕೆ 3 ಅಥವಾ 4 ಬಾರಿ ಶುದ್ಧಗೊಳಿಸುವುದು ಮತ್ತು ಜೇನು ತುಪ್ಪ ಅಥವಾ ಬೋರಾಕ್ಸ್‌ ಗ್ಲಿಸರಿನ್ ಅನ್ನು ಬಾಯಿ ಒಳಭಾಗಕ್ಕೆ ಸವರಬೇಕು ಎಂದರು. 

ಈ ಸಂದರ್ಭದಲ್ಲಿ ಡಾ. ಬಿ. ಎಸ್‌. ಕನಮಡಿ, ಡಾ. ವೆಂಕಟೇಶ ವಾಲೀಕರ, ಡಾ. ರಾಜಶೇಖರ ಕಾರಜೋಳ ಸೇರಿದಂತೆ ಅನೇಕ ಪಶು ವೈದ್ಯಾಧಿಕಾರಿಗಳು ಇದ್ದರು. 


ಸುದ್ದಿ ಓದಿ