ಕುವೆಂಪು ಅವರು 20 ನೇ ಶತಮಾನ ಕಂಡ ದೈತ್ಯ ಪ್ರತಿಭೆ: ಬಂಡೆ
ಇಂಡಿ: ಕುವೆಂಪು ಅವರು 20 ನೇ ಶತಮಾನ ಕಂಡ ದೈತ್ಯ ಪ್ರತಿಭೆ. ಅವರೊಬ್ಬ ರಸಋಷಿ. ತಮ್ಮ ಮೇರು ಕೃತಿ ರಾಮಾಯಣ ದರ್ಶನಂನಲ್ಲಿ ಈ ಕಾಲಕ್ಕೆ ಅಗತ್ಯವಾದ ದರ್ಶನವನ್ನು ನೀಡಿದ್ದಾರೆ. ಅವರ ನಾಟಕಗಳಿಗೆ ವೈಚಾರಿಕತೆಯ ಸ್ಪರ್ಶವಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಗುರುವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಕುವೆಂಪು ಅವರ ಜನ್ಮ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ಮಗುವೂ ಹುಟ್ಟುತ್ತಲೇ ವಿಶ್ವ ಮಾನವನಾಗಿರುತ್ತದೆ. ವ್ಯಕ್ತಿ ಬೆಳೆಯುತ್ತಾ ಜಾತಿ, ಅಂತಸ್ತು, ಬೇಧ ಭಾವಗಳ ಸಂಕೋಲೆಯಲ್ಲಿ ಸಿಲುಕಿ ಅಲ್ಪ ಮಾನವನಾಗುತ್ತಾನೆ. ಮನುಷ್ಯ ಸದಾ ವಿಶ್ವ ಮಾನವನಾಗಿಯೇ ಇರಬೇಕು ಎಂಬುದು ಕುವೆಂಪು ಅವರ ವಿಶ್ವ ಮಾನವ ಸಂದೇಶದ ಸಾರವಾಗಿದೆ ಎಂದರು.
ಶಿಕ್ಷಕ ಎಸ್.ಎಂ. ಮಕಾನದಾರ ಮಾತನಾಡಿ, ಪ್ರತೀ ಮನೆಯಲ್ಲೂ ಮಕ್ಕಳಲ್ಲಿ ಕನ್ನಡ ಪ್ರೇಮ ಬೆಳೆಸಬೇಕು. ಕುವೆಂಪು ಅವರ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದ್ದಾರೆ ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕ ಎ.ಎಂ. ಬೆದ್ರೇಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುವೆಂಪು ಅವರ ಸಾಹಿತ್ಯ ಎಲ್ಲಾ ವರ್ಗದ ವಯೋಮಾನದವರಿಗೆ ಅನ್ವಯವಾಗುವಂತೆ ವಿಶಾಲ ವ್ಯಾಪ್ತಿ ಹಾಗೂ ಹಲವು ಆಯಾಮಗಳನ್ನು ಒಳಗೊಂಡಿದೆ. ಇಂದಿನ ವಿದ್ಯಾರ್ಥಿಗಳು ಅವರ ಕೃತಿಗಳನ್ನು ಓದಿ ಅವರನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಕಿ ಎಸ್.ಎಚ್. ಮೈದರಗಿ ಮಾತನಾಡಿದರು, ಶಾಲಾ ಮಕ್ಕಳು ಕುವೆಂಪು ಅವರ ಕುರಿತು ಮಾತನಾಡಿದರು.