ಅಭಿಪ್ರಾಯ

ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಿಂದ ಜಾಗೃತಿ ಅರಿವು ಸಪ್ತಾಹ ಆಚರಣೆ

ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಿಂದ ಜಾಗೃತಿ ಅರಿವು ಸಪ್ತಾಹ ಆಚರಣೆ

ವಿಶೇಷ ವರದಿ 

ನಮ್ಮ ದೇಶದಲ್ಲಿ ಪ್ರತಿ ವಷ9 ಆಚರಿಸಲಾಗುವ ಒಂದು ಮಹತ್ವದ ವಾರ "Vigilance Awareness Week" ಅಂದರೆ "ಜಾಗೃತಿ ಅರಿವು ಸಪ್ತಾಹ" 

ವಿಜಿಲೆನ್ಸ ಅವೇರ್‌ನೆಸ್ ವೀಕ್ ಅನ್ನು ಪ್ರತಿ ವಷ9 ಭಾರತ ಸಕಾ9ರದ ಕೇಂದ್ರ ಜಾಗೃತಿ ಆಯೋಗ ಆಯೋಜಿಸುತ್ತದೆ. ಈ ವಾರವನ್ನು ಭ್ರಷ್ಟಾಚಾರ ವಿರೋಧಿ ಜಾಗೃತಿ ಮೂಡಿಸಲು, ಸಾವ9ಜನಿಕ ಜೀವನದಲ್ಲಿ ನೈತಿಕತೆ ಹಾಗೂ ಪಾರದರ್ಶಕತೆ ಹೆಚ್ಚಿಸಲು ಆಚರಿಸಲಾಗುತ್ತದೆ. 

1964 ರಲ್ಲಿ ಭಾರತ ಸರ್ಕಾರವು ಕೇಂದ್ರ ಜಾಗೃತಿ ಆಯೋಗವನ್ನು ರಚಿಸಿತು. ಇದರ ಉದ್ದೇಶ ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟುವುದು ಮತ್ತು ನೈತಿಕ ಆಡಳಿತವನ್ನು ಉತ್ತೇಜಿಸುವುದು. ತದನಂತರದಲ್ಲಿ ಭ್ರಷ್ಟಾಚಾರ ವಿರೋಧಿ ಜಾಗೃತಿಗೆ ಹೆಚ್ಚಿನ ಮಹತ್ವವನ್ನು ನೀಡಲು ಪ್ರತಿ ವರ್ಷ ವಿಜಿಲೆನ್ಸ ಅವೇರ್‌ನೆಸ್ ವೀಕ್ ಆಚರಿಸುವ ಪರಂಪರೆಯನ್ನು 1999 ರಲ್ಲಿ ಪ್ರಾರಂಭಿಸಿತು. 

ಈ ವಾರವನ್ನು ಭಾರತದ ಉಕ್ಕಿನ ಮನುಷ್ಯ ಎಂದೇ ಪ್ರಖ್ಯಾತಿ ಪಡೆದಿರುವ ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನಿ ಮತ್ತು ಕೇಂದ್ರ ಗೃಹ ಮಂತ್ರಿ ಯಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವಾದ ಅಕ್ಟೋಬರ್ 31ರ ರಂದು ಆಚರಿಸಲಾಗುತ್ತದೆ. ಇದು ಅವರ ಸತ್ಯನಿಷ್ಠೆ, ಶಿಸ್ತಿನ ರಾಷ್ಟ್ರ ಭಕ್ತಿಯ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. 

ಜಾಗೃತಿ ಅರಿವು ಸಪ್ತಾಹದ ಆಚರಣೆಯ ಉದ್ದೇಶಗಳೆನೆಂದರೆ: 

1. ಸರ್ಕಾರಿ ನೌಕರರಲ್ಲಿ ಸತ್ಯ ನಿಷ್ಠೆ, ಪ್ರಮಾಣಿಕತೆ ಮತ್ತು ಪಾರದರ್ಶಕತೆ ಬೆಳೆಸುವುದು 

2. ಭ್ರಷ್ಟಾಚಾರ ತಡೆಗೆ ಜನಸಾಮಾನ್ಯರ ಭಾಗವಹಿಸುವಿಕೆ ಹೆಚ್ಚಿಸುವುದು 

3. ಉತ್ತಮ ಆಡಳಿತ (Good Governance) ಕುರಿತು ಚರ್ಚೆ, ಉಪನ್ಯಾಸ, ಸ್ಪರ್ಧೆ ಇತ್ಯಾದಿಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಾಗಿದೆ. 

ಈ ವರ್ಷದ ಜಾಗೃತಿ ಅರಿವು ಸಪ್ತಾಹವನ್ನು 27ನೇ ಅಕ್ಟೋಬರ್ ನಿಂದ 2ನೇ ನವೆಂಬರ್ 2025 ರವರೆಗೆ ದೇಶಾದ್ಯಂತ “ಜಾಗೃತಿ: ನಮ್ಮೆಲ್ಲರ ಜವಾಬ್ದಾರಿ” ಎಂಬ ಘೋಷ ವಾಕ್ಯದೊಂದಿಗೆ 

ಆಚರಿಸಲಾಗುತ್ತದೆ. 

ಜನರು, ಸರ್ಕಾರಿ ನೌಕರರು, ಸಂಸ್ಥೆಗಳು ಎಲ್ಲರೂ ಭಾಗಿಯಾಗಬೇಕು ಎಂಬುದು ದ್ಯೇಯವಾಖ್ಯವಾಗಿದೆ. ಈ ವಾರದ ಅವಧಿಯಲ್ಲಿ ದೇಶಾದ್ಯಂತ ಜನರು ಭ್ರಷ್ಟಾಚಾರ ವಿರೋಧಿ ಶಪಥ ತೆಗೆದುಕೊಳ್ಳುತ್ತಾರೆ. ಶಾಲೆಗಳು ಮತ್ತು ಕಾಲೇಜುಗಳಲ್ಲಿ ಚಿತ್ರಕಲೆ, ಪ್ರಬಂಧ, ನಾಟಕ ಸ್ಪರ್ಧೆಗಳನ್ನು ಆಯೋಜಿಸುತ್ತಾರೆ. 

ಸರ್ಕಾರಿ ಕಚೇರಿಗಳಲ್ಲಿ ನೈತಿಕತೆ ಕುರಿತು ವರ್ಕಶಾಪ್ ಮತ್ತು ಸಂವಾದಗಳು ನಡೆಯುತ್ತವೆ.  

ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಭ್ರಷ್ಟಾಚಾರ ವಿರೋಧಿ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತದೆ.  ಈ ಎಲ್ಲದೂ ಜನ ಸಾಮಾನ್ಯರ ಮನಸ್ಸಿನಲ್ಲಿ "ನೈತಿಕತೆ ನಮ್ಮ ಜೀವನದ ಅವಿಭಾಜ್ಯ ಅಂಗ" ಎಂಬ ಭಾವನೆ ಬೇರೂರಿಸುವ ಉದ್ದೇಶಕ್ಕಾಗಿ ಮಾಡಲಾಗುತ್ತದೆ. 

ನಾವು ಪ್ರತಿ ದಿನವು ಸರ್ಕಾರಿ, ಖಾಸಗಿ, ಬ್ಯಾಂಕ್, ಶಿಕ್ಷಣ, ಆರೋಗ್ಯ ಹೀಗೆ ಅನೇಕ ರೀತಿಯ ಸೇವೆಗಳನ್ನು ಪಡೆಯುತ್ತೇವೆ, ಇವೆಲ್ಲವುಗಳಲ್ಲಿ ಪಾರದರ್ಶಕತೆ ಇರಬೇಕು ಅದು ನಮ್ಮ ಹಕ್ಕು ಹಾಗೂ ಅದನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಕೂಡ ಆಗಿದೆ. 

ಹಾಗಾದರೆ ರೈತರಿಗೆ ಮತ್ತು ಜಾಗೃತಿಗೆ ಹೇಗೆ ಸಂಭಂದ?  

ಸ್ವತಂತ್ರ್ಯ ಬಂದಾಗಿನಿಂದ ಭಾರತ ಕೃಷಿ ಆಧಾರಿತ ರಾಷ್ಟ್ರವಾಗಿದೆ, ರೈತ ರಾಷ್ಟ್ರದ ಬೆನ್ನೆಲುಬು ಎಂದು ಹೇಳಲಾಗುತ್ತದೆ. ಆದರೆ ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೋದಲ್ಲಿ ಪ್ರಕಟವಾಗುವ ಅಂಕಿ ಅಂಶದ ಪ್ರಕಾರ ಕಳೆದ ಕೆಲವು ವರ್ಷಗಳಲ್ಲಿ ವರ್ಷಕ್ಕೆ ಸರಿಸುಮರು 10700 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರ ಆತ್ಮಹತ್ಯೆ ನಾಗರಿಕ ಸಮಾಜಕ್ಕೊಂದು ದೊಡ್ಡ ಸವಾಲಾಗಿದೆ, ಅವಮಾನವಾಗಿದೆ. ತಾನು ಬೆಳೆದ ಬೆಳೆಗೆ ಖರ್ಚು ಮಾಡಿದಷ್ಟು ಹಣ ಮಾರಾಟದಿಂದ ಬರುತ್ತಿಲ್ಲ.   

ಭ್ರಷ್ಟಾಚಾರ ಕೃಷಿಯ ಪ್ರತಿಯೊಂದು ಹಂತಕ್ಕೂ ಸಂಬಂಧಿಸಿದೆ, ಉದಾಹರಣೆಗೆ ರೈತರಿಗೆ ನೀಡಲಾಗುವ ಸರ್ಕಾರಿ ಯೋಜನೆಗಳು, ರಿಯಾಯತಿ, ಬೀಜ ವಿತರಣಾ ಕೇಂದ್ರ ಹಾಗೂ ಬೆಳೆ ವಿಮೆ ಮತ್ತು ಕೃಷಿ ಸಾಲಗಳು.  ಇವೆಲ್ಲಾ ಸತ್ಯನಿಷ್ಠೆ ಇಂದ ನಡೆಯಬೇಕು. ನೈತಿಕತೆ ಇಲ್ಲದಿದ್ದರೆ, ರೈತನ ಹಣ ತಪ್ಪು ಕೈಗಳಿಗೆ ಹೊಗಬಹುದು. ಅದಕ್ಕಾಗಿ ರೈತರಲ್ಲಿ ಜಾಗೃತಿ ಮತ್ತು ಎಚ್ಚರಿಕೆ ಅಗತ್ಯ. ಆದ್ದರಿಂದ ರೈತರಾದ ನೀವುಗಳು ಪಾಲಿಸಬೇಕಾದ ಕ್ರಮಗಳೆಂದರೆ: 

1. ಸರ್ಕಾರಿ ಯೋಜನೆಗಳ ಮಾಹಿತಿ ತಿಳಿದುಕೊಳ್ಳಿ 

ಯಾವ ಯೋಜನೆಗೆ ನೀವು ಅರ್ಹರೋ, ಅದರ ಸರಿಯಾದ ನಿಯಮಗಳು ಹಾಗೂ ಪ್ರಯೋಜನೆಗಳನ್ನು ತಿಳಿದುಕೊಳ್ಳಿ. ಯಾವ ಅಧಿಕಾರಿಗಳನ್ನು ಭೇಟಿ ಮಾಡಬೇಕು, ಯಾವ ದಾಖಲೆಗಳು ಅಗತ್ಯ ಎಂಬುದನ್ನು ಸರಿಯಾಗಿ ಪರೀಶೀಲಿಸಿ. ಮಧ್ಯವರ್ತಿಗಳ ಮೊರೆ ಹೋಗಬೇಡಿ. 

2. ಲಂಚ ಕೊಡಬೇಡಿ ಮತ್ತು ಲಂಚ ಸ್ವೀಕರೆಸಬೇಡಿ 

ಪ್ರಾಮಾಣಿಕ ಮಾರ್ಗದಲ್ಲಿ ನಿಮ್ಮ ಕೆಲಸವನ್ನು ಮಾಡಿ. 

3. ಸಮೂಹದ ಬಲ ಬಳಸಿ 

ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವಂತೆ, ರೈತರ ಸಹಕಾರಿ ಸಂಘಗಳಲ್ಲಿ, ರೈತ ಉತ್ಪಾದಕ ಸಂಸ್ಥೆಗಳಲ್ಲಿ ಸೇರಿಕೊಂಡು ಅದರ ಸದುಪಯೊಗ ಪಡೆದುಕೊಳ್ಳಿ 

4. ಪ್ರಾಮಾಣಿಕತೆ ಉತ್ತಮ ಕೃಷಿಯ ಅಡಿಪಾಯ 

ಕೃಷಿಯಲ್ಲಿ ರಾಸಾಯನಿಕ ಅಥವಾ ಕೃತಕ ವಿಧಾನಗಳನ್ನ ಅತಿಯಾಗಿ ಬಳಸದಿರಿ, ಮಣ್ಣಿನ ಜೀವಾಣುಗಳನ್ನು ಕಾಪಾಡಿ. 

ಭೂಮಿಯ, ಪರಿಸರದ ಹಾಗೂ ಗಾಹಕರ ಹಿತಕ್ಕಾಗಿ ನೈತಿಕ ಕೃಷಿ ವಿಧಾನಗಳನ್ನು ಅನುಸರಿಸಿ. 

ನೀವು ಮಾಡುವ ಕೆಲಸವೂ ಸತ್ಯನಿಷ್ಠಿಯಿಂದ ಕೂಡಿದ್ದರೆ ಅದೇ ನಿಜವಾದ ಜಾಗೃತಿ. 

ಭ್ರಷ್ಟಾಚಾರ ಮುಕ್ತ ಕೃಷಿಯೆಂದರೆ  

1. ರೈತರ ಹಕ್ಕಿನ ಹಣ ರೈತರ ಕೈಗೆ ತಲುಪುವುದು 

2. ರೈತರ ಶ್ರಮಕ್ಕೆ ನ್ಯಾಯವಾದ ಬೆಲೆ ಸಿಗುವುದು ಮತ್ತು 

3. ಸರ್ಕಾರದ ಸಹಾಯ ಯೋಜನೆಗಳು ನಿಜವಾದ ಹಕ್ಕುದಾರರಿಗೆ ದೊರಕುವುದು. 

ನಮ್ಮ ಹೊಲದಲ್ಲಿ ನಾವು ಕಾಳಜಿ ವಹಿಸಿದಂತೆ ನಮ್ಮ ಸಮಾಜದಲ್ಲೂ ನೈತಿಕತೆ ಬೆಳೆಸೋಣ 

ಭ್ರಷ್ಟಾಚಾರ ಜಾಗೃತಿ ಅರಿವು ಸಪ್ತಾಹದಲ್ಲಿ ರೈತರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಆದ್ದರಿಂದ ಈ ವಾರದಲ್ಲಿ "ನಾನು ನೈತಿಕತೆಯ ಮಾರ್ಗದಲ್ಲಿ ನಡೆಯುತದತ್ತೇನೆ, ಲಂಚ ಕೊಡುವುದಿಲ್ಲ ಮತ್ತು ಲಂಚ ಸ್ವಿಕರಿಸುವುದಿಲ್ಲ" ವೆಂದು ಶಪಥ ಮಾಡಿ. 

ಭ್ರಷ್ಟಾಚಾರ ಮುಕ್ತ ಭಾರತ - ಪಾರದರ್ಶಕ ಭಾರತ - ಶ್ರೇಷ್ಠ ಭಾರತ 

ಹಾಗಾಗಿ, ಈ ವಾರದಲ್ಲಿ ನೀವೂ ಪಾಲ್ಗೊಳ್ಳಿ, ಸತ್ಯ ನಿಷ್ಟೆಯ ಭರವಸೆ ನೀಡಿ ಮತ್ತು ಇತರರನ್ನು ಪ್ರೇರೆಪಿಸಿ.  

ಡಾ. ಮಂಜು ಪ್ರಕಾಶ ಪಾಟೀಲ 

ವಿಜ್ಞಾನಿಗಳು (ಕೃಷಿ ವಿಸ್ತರಣೆ) 

ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ 


ಸುದ್ದಿ ಓದಿ