ರಾಜ್ಯದ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ ಮಾಧ್ಯಮ ಪ್ರಾರಂಭಕ್ಕೆ ತರಾತುರಿ ಬೇಡ
ಕರ್ನಾಟಕದ ಸರಕಾರಿ ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ದಲ್ಲಿಯೂ ಬೋಧನೆಗಾಗಿ ಮುಂದಾಗಿರುವದು ಆರ್ಥಿಕವಾಗಿ ದುರ್ಬಲರಾದವರಿಗೆ, ಆಂಗ್ಲ ಮಾಧ್ಯಮದ ಶಾಲೆಗಳ ಶುಲ್ಕ ಕಟ್ಟಲು ಸಾಧ್ಯವಿಲ್ಲದ ವರ್ಗಕ್ಕೆ ಒಂದು ಒಳ್ಳೆಯ ಉಪಕ್ರಮ ಯೋಜನೆ. ಇದನ್ನು ನಾನು ಸಾಮೂಹಿಕವಾಗಿ ಸ್ವಾಗತಿಸುತ್ತೇನೆ. ವೈಯಕ್ತಿಕ ನೆಲೆಯಲ್ಲಿ ವಿರೋಧಿಸುತ್ತೇನೆ. ಕಾರಣ ಇಷ್ಟೇ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಅಗತ್ಯವಾದ ಸೌಲಭ್ಯಗಳಿಲ್ಲ, ಸೌಕರ‌್ಯಗಳಿಲ್ಲ, ಸಿಬ್ಬಂದಿ ಇಲ್ಲ. ಸುಮಾರು 70,000 ದಷ್ಟು ಶಿಕ್ಷಕರ ಕೊರತೆ ಇದೆ. ಇದ್ದವರಲ್ಲಿ ವಿಷಯವಾರು ಬೋಧಿಸುವ ತಜ್ಞ ಶಿಕ್ಷಕರಿಲ್ಲ. ಇಂಗ್ಲೀಷನ್ನು ಕನ್ನಡದಲ್ಲಿ ಬೋಧಿಸಿದರೆ ಅದಕ್ಕೇನು ಅರ್ಥ? ಪರಿಣಾಮ ಏನಾಗುವದೆಂದರೆ ಅತ್ತ ಕನ್ನಡವೂ ಇಲ್ಲ, ಇತ್ತ ಇಂಗ್ಲೀಷೂ ಇಲ್ಲದ ಹಂಡಬಂಡ ಶಿಕ್ಷಣ ಪಡೆದು ಮಕ್ಕಳು ಏನಾಗಬೇಕು? ಇಡೀ ಒಂದು ಪೀಳಿಗೆ ಅಲ್ಲ, ಮುಂದಿನ ಪೀಳಿಗೆಯ ಭವಿಷ್ಯವೂ ಹಾಳಾಗುವುದರಲ್ಲಿ ಸಂದೇಹವಿಲ್ಲ. ಮೊದಲು ಶಿಕ್ಷಕರನ್ನು, ಕೊಠಡಿಗಳನ್ನು ಒದಗಿಸಿ. ಕಾಲಾಂತರ ದಲ್ಲಿ ಮಕ್ಕಳು ಆಂಗ್ಲ ಮಾಧ್ಯಮಕ್ಕೆ ಹೊರಳಿ ಕನ್ನಡ ಮಾಧ್ಯಮದ ವಿಭಾಗಗಳೇ ಮುಚ್ಚಬಹುದು. ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಣ ತಜ್ಞರ, ವರ್ಗಗಳಲ್ಲಿ ಬೋಧಿಸುವ ಶಿಕ್ಷಕರ ಅಭಿಪ್ರಾಯ ಪಡೆದು ಮುನ್ನಡೆಯಲು ಮನವಿ ಮಾಡುತ್ತೇನೆ.
ಪ್ರಾ. ಬಿ. ಎಸ್. ಗವಿಮಠ,
ನಿವೃತ್ತ ಪ್ರಿನ್ಸಿಪಾಲರು, ಶಿಕ್ಷಕರ ತರಬೇತಿ ಕಾಲೇಜು,
ಬೆಳಗಾವಿ.