ಅಭಿಪ್ರಾಯ

ಗಮನ ಸೆಳೆದ ಪಾರಂಪರಿಕ ನಡಿಗೆ

ಗಮನ ಸೆಳೆದ ಪಾರಂಪರಿಕ ನಡಿಗೆ

ಲೋಕದರ್ಶನ ವರದಿ 

ಪಾರಂಪರಿಕ ಸ್ಥಳಗಳಿಗೆ ಹೆಜ್ಜೆ ಹಾಕುವ ಆಸಕ್ತಿಗೆ ‘ಇನ್‌ಟ್ಯಾಕ್ ಸಂಸ್ಥೆ’ ನೀಡಿರುವ ಹೆಸರು ‘ಪಾರಂಪರಿಕ ನಡಿಗೆ’. ಸ್ಥಳ ಪುರಾಣ, ಇತಿಹಾಸ, ಸಾಂಸ್ಕೃತಿಕ ಮಹತ್ವ ಗೊತ್ತಿರುವ ನುರಿತ ಸಹೃದಯಿ ನಿಗದಿಯಾದ ಸ್ಥಳಗಳ ಬಗ್ಗೆ ವಿವರಣೆಗಳನ್ನು ನೀಡುತ್ತಾರೆ. ಇತಿಹಾಸ ಮತ್ತು ಪಾರಂಪರಿಕ ಪ್ರಜ್ಞೆಯನ್ನು ರೂಪಿಸುವ ಕಾಳಜಿಯಿಂದ ತಮ್ಮ ಗ್ರಹಿಕೆಗಳನ್ನು ಹಂಚಿಕೊಳ್ಳುತ್ತಾರೆ. ಆಸಕ್ತರ ಪ್ರಶ್ನೆಗಳಿಗೆ ಉತ್ತರವನ್ನು ಅವರು ನೀಡುತ್ತಾರೆ. ಧಾರವಾಡ ಕರ್ನಾಟಕ ಉತ್ತರ ಭಾಗದಲ್ಲಿರುವ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕವಾಗಿ ಪ್ರಮುಖ ನಗರ ಎಂದು ಪ್ರಸಿದ್ಧಿ ಪಡೆದಿದೆ. ಉತ್ತರ ಕರ್ನಾಟಕದ ವಿದ್ಯಾಕಾಶಿ ಎಂದು ಕರೆಯಲ್ಪಡುವ ಧಾರವಾಡವು ಜ್ಞಾನಪೀಠ ಪ್ರಶಸ್ತಿ ವಿಜೇತರು, ಹಿಂದೂಸ್ತಾನಿ ಸಂಗೀತಗಾರರು ಮತ್ತು ಪ್ರಸಿದ್ಧ ಧಾರವಾಡ ಪೇಡಾಗೆ ಹೆಸರುವಾಸಿಯಾಗಿದೆ. 

ಇದೇ ಧಾರವಾಡ ಮುಂಚೆ ಹೇಗಿತ್ತು ? ಇಲ್ಲಿನ ಇತಿಹಾಸ ಏನು? ಐತಿಹಾಸಿಕ ಸ್ಥಳಗಳ ವಿಶೇಷತೆ ಎನಿದೆ ಎಂಬುದರ ಪರಿಚಯ ಸಾಮಾನ್ಯವಾಗಿ ಯಾರಿಗೂ ಗೊತ್ತಿರುವದಿಲ್ಲ. ಹತ್ತಾರು ವರ್ಷಗಳಿಂದ ಇಲ್ಲೇ ನೆಲೆ ನಿಂತಿದ್ದರೂ ಇಲ್ಲಿನ ಇತಿಹಾಸ ತಿಳಿದಿರುವದಿಲ್ಲ. ಐತಿಹಾಸಿಕ ಸ್ಥಳಗಳಿಗೆ ಭೇಟಿಯನ್ನು ಮಾಡುವದಿಲ್ಲ. ಕೆಲವರಿಗೆ ಈ ವಿದ್ಯಾಕಾಶಿಯ ಐತಿಹ್ಯ ತಿಳಿಯುವ ಆಸಕ್ತಿ ಇದ್ದರೂ ತಿಳಿಸುವವರು ಯಾರು, ಮಾರ್ಗದರ್ಶನ ನೀಡುವವರು ಯಾರು ಎಂಬ ಸಮಸ್ಯೆ. ಇತಿಹಾಸ ತಿಳಿಯುವ ಆಸಕ್ತರಿಗೆಂದೆ ಇನ್‌ಟ್ಯಾಕ್ ಎಂಬ ಸಂಸ್ಥೇ ಇಂತಹ ಸ್ಥಳಗಳನ್ನು ಗುರುತಿಸಿ ಪಾರಂಪರಿಕ ನಡಿಗೆ ಆಯೋಜಿಸಿದೆ. ಅಂತೆಯೇ ಎಪ್ರೀಲ್ 7ರಂದು ಮಂಗಳವಾರ ಧಾರವಾಡದ ಪಾರಂಪರಿಕ ಹಾಗೂ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿರುವ ಹೊಸಯಲ್ಲಾಪುರದ ಶುಕ್ರವಾರ ಪೇಟೆಯ ಮಂಗ್ಯಾನ ಮಹಲ್‌ದಿಂದ ಗಾಂಧಿಚೌಕದ ದತ್ತ ಮಂದಿರದ ಹಿಂದಿರುವ ಶ್ರಿಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯವರೆಗೆ ಬೆಳಿಗ್ಗೆ 6.30 ರಿಂದ 8.30ರ ವರೆಗೆ ಎರಡು ಗಂಟೆಗಳ ‘ಹೆರಿಟೇಜ್ ವಾಕ್‌’ ಕಾರ್ಯಕ್ರಮವನ್ನು ಇಂಟ್ಯಾಕ್ ಸದಸ್ಯರಿಗೆ ಆಯೋಜಿಸಿತ್ತು. 

ಅಂದು ಬೆಳಿಗ್ಗೆ 6.15ಕ್ಕೆ ನಾವೆಲ್ಲ ಹೊಸಯಲ್ಲಾಪುರದಲ್ಲಿರುವ ಸಂಸ್ಕೃತಿ ಚಿಂತಕ ಡಾ.ಶಶಿಧರ ನರೇಂದ್ರ ಅವರ ಮನೆಯಲ್ಲಿ ಸೇರಿದೆವು. ಅವರ ಸಂಗಾತಿ ಡಾ.ಸುಚರಿತಾರವರ ಬಿಸಿ ಬಿಸಿಯ ಚಹಾದೊಂದಿಗೆ ನಾವೆಲ್ಲ ಪಾರಂಪರಿಕ ನಡಿಗೆಯನ್ನು ಪ್ರಾರಂಭಿಸಿದೆವು. ಮೊದಲು ಅವರ ಮನೆಯ ಹತ್ತಿರದಲ್ಲಿದ್ದ ಮಂಗ್ಯಾನ್ ಮಹಲ್‌ಗೆ ಭೇಟಿ ಕೊಟ್ಟೆವು. ಅಂದಾಜು 1890ರಲ್ಲಿ ಹಾವೇರಿಯ ಖ್ಯಾತ ವಕೀಲರಾದ ಭೀಮರಾವ್ ಜೋಶಿ ಅವರು ಶುಕ್ರವಾರ ಪೇಟೆಯಲ್ಲಿ ನಾಲ್ಕಂತಸ್ತಿನ ಇಮಾರತನ್ನು ಕಟ್ಟಿಸಿದರು. ಬಾಗಿಲು, ಕಿಡಕಿ, ಅಟ್ಟದ ಮೆಟ್ಟಿಲುಗಳು, ಕಂಬಗಳು ಎಲ್ಲವನ್ನೂ ಸಾಗವಾನಿ ಕಟ್ಟಿಗೆಯಲ್ಲಿಯೇ ಕುಸರಿ ಕೆತ್ತನೆಯ ಕೆಲಸದೊಂದಿಗೆ ಭೀಮರಾಯರು ಶೋಭಿಸುವಂತೆ ಮಾಡಿದರು. ಆಗ ಧಾರವಾಡದಲ್ಲಿ ಇದೊಂದೇ ಬಹುಮಹಡಿಯ ಮನೆಯಾಗಿತ್ತು. ಮನೆಯಲ್ಲಿಯೇ ಚಿಕ್ಕದಾದ ಚೊಕ್ಕದಾದ ಹನುಮಂತ ದೇವರ ಗುಡಿಯನ್ನು ಕಟ್ಟಿಸಿದರು. ಜೋಶಿ ಮನೆತನ ಅವಿಭಕ್ತ ಕುಟುಂಬವಾಗಿದ್ದರಿಂದ ನಾಲ್ಕು ಅಂತಸ್ತಿನಲ್ಲಿ ಕುಟುಂಬದವರೆಲ್ಲ ನೆಲೆಸಿದ್ದರು. ಜೋಶಿಯವರ ಸ್ನೇಹಿತರಾದ ರಾ.ಹ.ದೇಶಪಾಂಡೆಯವರು ಅದೇ ಮನೆಯಲ್ಲಿಯೇ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಹುಟ್ಟು ಹಾಕಿ, ಪ್ರಾರಂಭದಲ್ಲಿ ಸಭೆಗಳನ್ನು ನಡೆಸಿದ್ದರು. ವರ್ಷಗಳು ಕಳೆದಂತೆ ಜೋಶಿಯವರ ಮಕ್ಕಳು, ಮೊಮ್ಮಕ್ಕಳು ನೌಕರಿಗಾಗಿ ದೊಡ್ಡ ಪಟ್ಟಣಗಳನ್ನು ಸೇರಿದರು. ಮನೆಯಲ್ಲಿ ಜನಸಂಖ್ಯೆ ಕಡಿಮೆಯಾಯಿತು. ಮೇಲಿನ ಎರಡು ಅಂತಸ್ತುಗಳು ಖಾಲಿಯಾದವು. ಕ್ರಮೇಣ ಊರ ಹೊರಗಿನ ನೂರಾರು ಮಂಗಗಳು ಮೇಲಿನ ಎರಡು ಅಂತಸ್ತುಗಳನ್ನು ಆಕ್ರಮಿಸಿಕೊಂಡವು. ಮುಂಜಾನೆ, ಸಂಜೆ ಹೊತ್ತಿನಲ್ಲಿ ಮಂಗಗಳು ಚೇಷ್ಟೆ ಮಾಡುವದನ್ನು ಓಣಿಯ ಹುಡುಗರು-ಜನರು ನೋಡುತ್ತ ನಿಲ್ಲುತ್ತಿದ್ದರು. ಆಗ ಜನರು ಈ ಮನೆಗೆ ‘ಮಂಗ್ಯಾನ್ ಮಹಲ್‌’ ಎಂದೂ ಅನ್ವರ್ಥಕ ಹೆಸರಿನಿಂದ ಕರೆಯಲಾರಂಭಿಸಿದರು. ನಂತರ ಮಾಲೀಕರು ಮಂಗಗಳ ಉಪದ್ರವ ತಾಳದೇ ಮೇಲಿನ ಅಂತಸ್ತುಗಳನ್ನು ಕೆಡವಿಸಿದರು. ಮಂಗಗಳು ಪಲಾಯನವಾದವು. ಆದರೆ ಈಗಲೂ ಜನರು ಈ ಕಟ್ಟಡಕ್ಕೆ ಮಂಗ್ಯಾನ ಮಹಲ್ ಎಂದೇ ಕರೆಯುತ್ತಾರೆ. 

ನಂತರ ನಾವೆಲ್ಲ ವಚನ ಪಿತಾಮಹ ಫ.ಗು.ಹಳಕಟ್ಟಿಯವರ ಮನೆ, ಶ್ರೀ ಕಲ್ಮೇಶ್ವರ ದೇವಸ್ಥಾನ, ಜಗದ್ಗುರು ಮಳೆಮಲ್ಲೇಶ್ವರ ಮಹಾಸಂಸ್ಥಾನ ಹಿರೇಮಠ, ಪದ್ಮಭೂಷಣ ಡಾ.ಬಸವರಾಜ ರಾಜಗುರು ಅವರ ಸಮಾಧಿ, ನುಚ್ಚುಂಬಲಿ ಬಾವಿ, ಜಡ್ಜ್‌ ಬಾವಿ, ಗಾನಗಂಗೆ ಡಾ.ಗಂಗೂಬಾಯಿ ಹಾನಗಲ್ ಅವರು ಜನಿಸಿದ ಮನೆ ಗಂಗೋತ್ರಿ, ಬಸದಿ ಓಣಿಯಲ್ಲಿ ಬೆಟಗೇರಿ ಕೃಷ್ಣ ಶರ್ಮರ ಮನೆ, ಭಗವಾನ ಆದಿನಾಥ ಬಸದಿ, ಹಿಂದುಸ್ಥಾನಿ ಗಾಯಕಿ ಸುಲಭಾದತ್ತ ನೀರಲಗಿ, ವಿನಾಯಕ ತೊರವಿ ಅವರ ಮನೆ, ಗೋಂದಳಿ ಸಮಾಜದ ಸಂತ ಸಮಾಜ ಹರಿಮಂದಿರ, ಠಾಕೂರ ತಾಲೀಮ ಗರಡಿ ಮನೆ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಗಾಂಧಿ ಹಿಂದಿ ಪ್ರೌಢಶಾಲೆ-ಚಾಚಾ ನೆಹರು ಶಿಶು ವಿಹಾರ-ಪಾರ್ಶ್ವನಾಥ ಹಿಂದಿ ಪ್ರಾಥಮಿಕ ಶಾಲೆ, ಕಾಮನಕಟ್ಟೆ, ಕಿತ್ತೂರ ಚೆನ್ನಮ್ಮ ಗುರುಗಳ ವಂಶಸ್ಥ ಕಟ್ಟಿಮಠರ ಮನೆ, ಕಾಳಿಕಾ ದೇವಸ್ಥಾನ, ನಂದಿಕೋಲ ಬಸವಣ್ಣ, ನಗರೇಶ್ವರ ದೇವಸ್ಥಾನ, ಭೂಸಪೇಟೆಯ ಕಾಮಣ್ಣ, ಪೋತ್ನಿಸ್ ಓಣಿಯ ದ.ರಾ.ಬೇಂದ್ರೆಯವರು ಜನಿಸಿದ ಮನೆ, ಮನೋಹರ ಗ್ರಂಥ ಮಾಲೆಯ ಜಿ.ಬಿ.ಜೋಶಿಯವರ ಮನೆ, ಹೆಬ್ಬಳ್ಳಿ ಅಗಸಿ, ಗಣಪತಿ ದೇವಸ್ಥಾನ, ವಿಕ್ಟೋರಿಯಾ ಹೈಸ್ಕೂಲ (ವಿದ್ಯಾರಣ್ಯ ಶಾಲೆ), ಸಮಾಜ ಪುಸ್ತಕಾಲಯ, ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆ ಮತ್ತು ದತ್ತ ಮಂದಿರಗಳೀಗೆ ಭೇಟಿ ನೀಡಿ ಪುನೀತರಾದೆವು. 

ದತ್ತ ಮಂದಿರ ಬದಿಯಲ್ಲಿಯೇ ಇದ್ದ ಪಾರಂಪರಿಕ ಬಾಂಬೆ ರೆಸ್ಟೋರೆಂಟಗೆ ಹೋಗಿ ತಪ್ಪದ ದೋಸೆಯನ್ನು ಸವಿದೆವು. ವೈವಿದ್ಯಮಯವಾದ ದೋಸೆ ತಯಾರಿಕೆಯೊಂದಿಗೆ, ಅದನ್ನು ಗ್ರಾಹಕರಿಗೆ ನೀಡುವ ಬಗೆಯಲ್ಲಿಯೇ ಧಾರವಾಡದ ದೋಸೆಗಳ ವೈಶಿಷ್ಟ್ಯ ಅಡಗಿದೆ. ಎನ್ಕೆ ಅವರು ‘ಮುಂಜಾನೆ ದೋಸೆ ತಿಂದರೆ ಸಾಯಂಕಾಲವರೆಗೂ ಕೈ ವಾಸನೆ ಹೋಗುತ್ತಿರಲಿಲ್ಲ’ ಎಂದು ಹೇಳುತ್ತಿದ್ದನ್ನು ನೆನಪಿಸಿಕೊಂಡರು. ನಂತರ ನಾವೆಲ್ಲ ಜಕಣಿಬಾವಿಗೆ ತೆರಳಿದೆವು. ಈ ಬಾವಿಯು ಧಾರವಾಡದ ಮಧ್ಯವರ್ತಿ ಮಾರುಕಟ್ಟೆ ಸ್ಥಳದಲ್ಲಿದ್ದು, ಜಕ್ಕಣಿ ಅಥವಾ ಶಕ್ತಿದೇವತೆಯಿಂದ ಇದಕ್ಕೆ ಜಕ್ಕಣಿ ಬಾವಿ ಎಂದು ಹೆಸರು ಬಂದಿದೆ. ಇದು 62 ಫೂಟ ಆಳವಿದ್ದು, 4356 ಚದರ ಪೂಟ ವಿಸ್ತಾರವಾದ ಬಾವಿಯಲ್ಲಿಯ ಕುಡಿಯುವ ನೀರನ್ನು ಅಲ್ಲಿನ ಜನರು ಉಪಯೋಗಿಸುತ್ತಿದ್ದರು. ಆದರೆ ಈಗ ಜಕ್ಕಣಿಬಾವಿಯನ್ನು ಗುರುತಿಸಲು ಅಸಾಧ್ಯವಾಗದ ಸ್ಥಿತಿಯಲ್ಲಿದ್ದೇವೆ. ಅದರ ಪಕ್ಕದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಗೋಳಿಬಾರಿನಲ್ಲಿ ಮಡಿದ ಹುತಾತ್ಮರ ನೆನಪಿನ ಸ್ಮಾರಕವಿದೆ. ಬ್ರಿಟಿಷರ ವಿರುದ್ಧ ದೇಶದಾಂತ್ಯ ನಡೆದ ಅಸಹಕಾರ ಚಳವಳಿಯ ಸಂದರ್ಭದಲ್ಲಿ 1921 ಜುಲೈ 1ರಂದು ಧಾರವಾಡದ ಜಕಣಿಬಾವಿ ಬಳಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿ ಪರಿಣಾಮ ಮೂವರು ರಾಷ್ಟ್ರಭಕ್ತರು ಹುತಾತ್ಮರಾದರು. ಮಲ್ಲಿಕಸಾಬ್ ಮರ್ದಾನ ಸಾಬ್, ಗೌಸುಸಾಬ್ ಖಾದರಸಾಬ್ ಮತ್ತು ಅಬ್ದುಲ್‌ಗಫಾರ ಚೌಕ್‌ಥಾಯಿ ಎಂಬ ಮೂವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟರು. ಅವರ ನೆನಪಿಗಾಗಿ ಇಲ್ಲಿ ಒಂದು ಸ್ಮಾರಕ ನಿರ್ಮಿಸಲಾಗಿದೆ. ಈ ಸ್ಮಾರಕವು ಧಾರವಾಡದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಪ್ರಮುಖ ಸಾಕ್ಷಿಯಾಗಿದೆ. 

‘ಇದೇನೂ ಇತಿಹಾಸದ ಪಾಠ ಅಲ್ಲ. ನಮ್ಮನ್ನು ನಾವು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಒಂದು ಬೌದ್ಧಿಕ ವ್ಯಾಯಾಮ ಎನ್ನಬಹುದಾದ ನಡಿಗೆ. ನಾವು ಏನನ್ನು ಕಳೆದುಕೊಳ್ಳುತ್ತಾ ಇದ್ದೇವೆ ಎನ್ನುವದರ ಪ್ರಜ್ಞೆ ಬಂದರೆ ತಾನೇ ಏನೇನನ್ನು ಉಳಿಸಿಕೊಳ್ಳಬೇಕು ಎನ್ನುವ ಕಾಳಜಿ ಹುಟ್ಟುವದು. ಕಳೆದುಕೊಂಡದ್ದರ ಮೌಲ್ಯ ಗೊತ್ತಾದಾಗ ಪಡೆದುಕೊಳ್ಳುವ ಹಸಿವು ಹೆಚ್ಚಾಗುತ್ತದೆ. ಈ ಕೆಲಸವನ್ನು ನಾವು ಕಳೆದ ಹಲವು ವರ್ಷಗಳಿಂದ ಮಾಡುತ್ತಿದ್ದೇವೆ’ ಎಂದು ಸಂಸ್ಕೃತಿ ಚಿಂತಕ ಡಾ.ಶಶಿಧರ ನರೇಂದ್ರ ಹೇಳಿದರು. ಇಂಟ್ಯಾಕ್ ಸಂಸ್ಥೆಯ ಸಂಚಾಲಕ ಡಾ.ಮೋಹನ ಮಠ ಅವರಿಗೆ 82 ವರ್ಷಗಳಾಗಿದ್ದರೂ ಆಸಕ್ತಿಯಿಂದ ಪಾರಂಪರಿಕ ನಡಿಗೆಯ ನೇತೃತ್ವ ವಹಿಸಿದ್ದರು. 72 ವಯಸ್ಸಿನ ಸಹ ಸಂಚಾಲಕ ಆರ್‌.ಜಿ.ತಿಮ್ಮಾಪುರ ಮೊಣಕಾಲು ನೋವಿದ್ದರೂ ಪಾರಂಪರಿಕ ನಡಿಗೆಯನ್ನು ಪೂರ್ಣಗೊಳಿಸಿದರು. 75 ವಯಸ್ಸಿನ ಶೈಲಾ ಕರಗುದರಿ ಅವರ ಸ್ಪೂರ್ತಿಯ ನಡಿಗೆ ಎಲ್ಲರಿಗೂ ಮಾದರಿಯಾಯಿತು. ಅಂಜುಮನ್ ಕಾಲೇಜಿನ ಪ್ರಾಚಾರ್ಯ ಡಾ.ಎನ್‌.ಬಿ.ನಾಲ್ವತವಾಡ, ಬಿ.ಆರ್‌.ಸಾರಥಿ, ಡಾ.ರಾಜಶ್ರೀ ಗುದಗನವರ, ಪ್ರೊ.ಸುರೇಶ ಗುದಗನವರ, ಅಮ್ರತಾ ಜೋಶಿ, ರಶ್ಮೀ ಭಾರದ್ವಾಜ, ಶ್ರೀಕಾಂತ ಭಾರದ್ವಾಜ ಪಾರಂಪರಿಕ ನಡಿಗೆಗೆ ಸಾಕ್ಷಿಯಾದರು. 

ಭಾರತೀಯ ಕಲೆ ಮತ್ತು ಪಾರಂಪರಿಕ ಸ್ಥಳಗಳ ಉಳಿವಿಗೆ ಶ್ರಮಿಸುತ್ತಿರುವ ‘ಇಂಡಿಯನ್ ನ್ಯಾಷನಲ್ ಟ್ರಸ್ಟ್‌ ಫಾರ್ ಆರ್ಟ್‌ ಆಂಡ್ ಕಲ್ಚರಲ್ ಹೇರಿಟೇಜ್‌’ (ಇನ್‌ಟ್ಯಾಕ್) ಸಂಸ್ಥೆ ನಾಲ್ಕು ದಶಕಗಳಷ್ಟು ಹಳೆಯದು. ದೇಶದಲ್ಲಿ 200ಕ್ಕೂ ಹೆಚ್ಚು ಪ್ರಾದೇಶಿಕ ಕಛೇರಿಗಳನ್ನು ಹೊಂದಿರುವ ಈ ಸಂಸ್ಥೆ, ಭಾರತೀಯ ಕಲೆ ಮತ್ತು ಪಾರಂಪರಿಕ ಸ್ಥಳಗಳನ್ನು ರಕ್ಷಿಸಬೇಕು ಎನ್ನುವ ಉನ್ನತ ಅಭಿರುಚಿ ಹೊಂದಿರುವ ಹಾಗೂ ಸಮಾನ ಮನಸ್ಕರ ತಂಡದಿಂದ ರಚಿಸಲ್ಪಟ್ಟಿದೆ. ಇಂಟ್ಯಾಕ್ ಧಾರವಾಡ ಘಟಕವು ಭಾರತೀಯ ಕಲೆ ಮತ್ತು ಪಾರಂಪರಿಕ ಸ್ಥಳಗಳ ಉಳಿವಿಗೆ ಶ್ರಮಿಸುತ್ತಿದೆ. ನಮ್ಮ ತಿಳಿವಳಿಕೆಯನ್ನು ಬೆಳೆಸುವದರ ಜೊತೆಗೆ ಅಭಿರುಚಿಯನ್ನು ತಿದ್ದುವ ಈ ಪಾರಂಪರಿಕ ನಡಿಗೆ ಇನ್ನೂ ಹಲವು ದಿಕ್ಕುಗಳಲ್ಲಿ ಜ್ಞಾನಕೋಶಗಳನ್ನು ತೆರೆಯಬಹುದು. ಇದಕ್ಕೆ ಪ್ರಾಥಮಿಕವಾಗಿ ಮಾಡಬೇಕಾದ್ದೆಂದರೆ ಈ ದಿಕ್ಕಿನಲ್ಲಿ ಮೊದಲ ಹೆಜ್ಜೆಯನ್ನಿಡುವದು. 

ಆಧುನಿಕೆಯ ಗಾಳಿ ಬೀಸಿದಂತೆಲ್ಲ ಐತಿಹಾಸಿಕ ನೆಲೆಗಳ ಬಗೆಗಿನ ಅಭಿಮಾನ ಹಾಗೂ ತಿಳಿವಳಿಕೆ ಕೂಡ ಕಡಿಮೆಯಾಗುತ್ತಿರುವದು ವಿಷಾದದ ಸಂಗತಿ. ಯುವಜನರು ಇತಿಹಾಸದ ಕುರುಹುಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಧಾರವಾಡದ ಪಾರಂಪರಿಕ ವಿಚಾರಗಳ ಬಗ್ಗೆಯೇ ಅರಿವಿಲ್ಲದಿದ್ದರೆ ನಾವು ಈ ಧಾರವಾಡವನ್ನು ಪ್ರೀತಿಸುವುದಾದರೂ ಹೇಗೆ. ಧಾರವಾಡದ ಬಗ್ಗೆ ಹೆಚ್ಚು ತಿಳಿದುಕೊಂಡಷ್ಟು ಇದು ನಮಗೆ ಮತ್ತಷ್ಟು ಆಪ್ತವಾಗುತ್ತದೆ. 

ಲೇಖಕರು ಸುರೇಶ ಗುದಗನವರ 

ಧಾರವಾಡ  

9449294694 




ಸುದ್ದಿ ಓದಿ