ಉತ್ತರ ಕರ್ನಾಟಕಕ್ಕೆ ಉದ್ಯಮ ತರುವುದು ಸವಾಲು; ಆದರೂ ಪ್ರಯತ್ನ ಬಿಟ್ಟಿಲ್ಲ: ಎಂ.ಬಿ. ಪಾಟೀಲ ಮುಳವಾಡದಲ್ಲಿ ‘ರಿಲಯನ್ಸ್ ಕ್ಯಾಂಪಾ ಕೋಲಾ’ ಘಟಕಕ್ಕೆ ಭೂಮಿಪೂಜೆ | ವಿಜಯಪುರದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಘಟಕ ಸ್ಥಾಪನೆಗೆ ಅಸ್ತು
ಕೊಲ್ಹಾರ (ವಿಜಯಪುರ): ‘‘ಉದ್ಯಮಿಗಳು ಬೆಂಗಳೂರು ಸುತ್ತಮುತ್ತಲೇ ಕೈಗಾರಿಕೆಗಳನ್ನು ಸ್ಥಾಪಿಸಲು ಹೆಚ್ಚಿನ ಒಲವು ತೋರುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕಕ್ಕೆ ಉದ್ಯಮಿಗಳನ್ನು ಆಕರ್ಷಿಸುವುದು ಸವಾಲಿನ ಕೆಲಸವಾಗಿದೆ.
ನೆರೆಯ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಗುಜರಾತ್ ರಾಜ್ಯಗಳು ಕಡಿಮೆ ದರದಲ್ಲಿ ಭೂಮಿ, ರಿಯಾಯಿತಿ ನೀಡಿ ಪೈಪೋಟಿ ಒಡ್ಡುತ್ತಿವೆ. ಇಷ್ಟೆಲ್ಲಾ ಸವಾಲುಗಳ ನಡುವೆಯೂ ಉತ್ತರ ಕರ್ನಾಟಕಕ್ಕೆ ಕೈಗಾರಿಕೆಗಳನ್ನು ತರುವ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿ ನಡೆದಿದೆ,’’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ತಾಲೂಕಿನ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ‘ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್’ ವತಿಯಿಂದ ಸ್ಥಾಪನೆಯಾಗಲಿರುವ ‘ಕ್ಯಾಂಪಾ ಕೋಲಾ’ ಉತ್ಪಾದನಾ ಘಟಕಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ‘‘ಕ್ಯಾಂಪಾ ಕೋಲಾ ಘಟಕದಿಂದ ವಿಜಯಪುರ ಜಿಲ್ಲೆಯ ಕೈಗಾರಿಕಾ ಪ್ರಗತಿಗೆ ಹೊಸ ವೇಗ ಸಿಗಲಿದೆ.
ಮುಂದಿನ ದಿನಗಳಲ್ಲಿ ವಿಂಗ್ಸ್ ವಿಟೇರಾ, ಹಿಂದೂಸ್ಥಾನ್ ಕೋಕಾ-ಕೋಲಾ, ಹೈಟೆಕ್ ಫೈಬ್ಸ್, ಸರ್ವರ್ ಟೆಕ್ ಪವರ್ ಸಿಸ್ಟಂ, ಮೆಟಾಗ್ರೂಪ್ ಹಾಗೂ ಏರೋಸ್ಪೇಸ್ ಮತ್ತು ರಕ್ಷಣಾ ವಲಯದ ‘ಟೋನ್ಬೋ ಇಮೇಜಿಂಗ್’ ಸೇರಿದಂತೆ ಹಲವು ದಿಗ್ಗಜ ಕಂಪನಿಗಳು ಜಿಲ್ಲೆಯಲ್ಲಿ ಹೂಡಿಕೆ ಮಾಡಲಿವೆ. ಈಗಾಗಲೇ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ,’’ ಎಂದು ವಿವರಿಸಿದರು.
500ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ:
‘‘ವಿಜಯಪುರದಲ್ಲಿ ‘ಮೈಸೂರು ಸ್ಯಾಂಡಲ್ ಸೋಪ್’ ಉತ್ಪಾದನಾ ಘಟಕ ಸ್ಥಾಪಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಆರಂಭಿಕ ಹಂತದಲ್ಲೇ 500ಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗ ಸಿಗಲಿದೆ. ರಿಲಯನ್ಸ್‌ನಂತಹ ಬೃಹತ್ ಸಂಸ್ಥೆಗಳು ಹೊರಗುತ್ತಿಗೆ ಬದಲು ನೇರವಾಗಿ ಕಾಯಂ ಹುದ್ದೆಗಳನ್ನು ಸೃಷ್ಟಿಸಿ, ಸ್ಥಳೀಯ ಯುವಕರಿಗೆ ಆದ್ಯತೆ ನೀಡಬೇಕು,’’ ಎಂದು ಮನವಿ ಮಾಡಿದರು. ಇದೇ ವೇಳೆ, ಕೆಐಎಡಿಬಿಯಿಂದ ಭೂಮಿ ಕಳೆದುಕೊಂಡ ರೈತರಿಗೆ ತ್ವರಿತವಾಗಿ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಬಾರಾಮತಿ ಮಾದರಿಯಲ್ಲಿ ವಿಜಯಪುರ ಅಭಿವೃದ್ಧಿ ಕನಸು
‘‘ಕೃಷಿ, ತೋಟಗಾರಿಕೆ, ಹೈನುಗಾರಿಕೆ ಹಾಗೂ ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಮಗ್ರ ಅಭಿವೃದ್ಧಿ ಸಾಧಿಸುವ ಗುರಿ ಹೊಂದಿದ್ದೇನೆ. ಹಿರಿಯ ನಾಯಕ ಶರದ್ ಪವಾರ್ ಅವರು ಮಹಾರಾಷ್ಟ್ರದ ಬಾರಾಮತಿಯನ್ನು ಅಭಿವೃದ್ಧಿಪಡಿಸಿದ ಮಾದರಿಯಲ್ಲಿ ವಿಜಯಪುರ ಜಿಲ್ಲೆಯನ್ನು ರೂಪಿಸಬೇಕು ಎಂಬುದು ನನ್ನ ಕನಸು. ಈ ನಿಟ್ಟಿನಲ್ಲಿ ದೃಢ ವಿಶ್ವಾಸದಿಂದ ಮುನ್ನಡೆಯುತ್ತಿದ್ದೇನೆ,’’ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಸ್ಥಳೀಯರಿಗೆ ಉದ್ಯೋಗ ನೀಡಲು ಶಿವಾನಂದ ಪಾಟೀಲ ಆಗ್ರಹ
ಅಧ್ಯಕ್ಷತೆ ವಹಿಸಿದ್ದ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ‘‘ರೈತರು ಕೇವಲ ಕಬ್ಬನ್ನೇ ನೆಚ್ಚಿಕೊಳ್ಳದೆ ದಾಳಿಂಬೆ, ದ್ರಾಕ್ಷಿಯಂತಹ ಪರ್ಯಾಯ ಬೆಳೆಗಳನ್ನು ವೈಜ್ಞಾನಿಕವಾಗಿ ಬೆಳೆಯಬೇಕು. ಈ ಹಿಂದೆ ಎನ್‌ಟಿಪಿಸಿ ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆ ನೀಡಿತ್ತು, ಆದರೆ ಹೊರಗುತ್ತಿಗೆ ವ್ಯವಸ್ಥೆಯಿಂದ ಸ್ಥಳೀಯರಿಗೆ ಅನ್ಯಾಯವಾಗಿದೆ. ಹೊಸದಾಗಿ ಬರುತ್ತಿರುವ ಕ್ಯಾಂಪಾ ಕೋಲಾ ಘಟಕದಲ್ಲಾದರೂ ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಬೇಕು,’’ ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಕಟಕದೊಂಡ, ಮಾಜಿ ಶಾಸಕ ರಾಜು ಆಲಗೂರ, ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಕೇತನ್ ಮೋದಿ, ಉಪಾಧ್ಯಕ್ಷ ಅರ್ಪಣ್ ಬಸು, ಕೆಐಎಡಿಬಿ ಸಿಇಒ ಗೋವಿಂದರೆಡ್ಡಿ, ದೊಡ್ಡ ಬಸವರಾಜು, ಡಾ. ಗಂಗಾಧರ ಸಂಬಣ್ಣಿ, ಅಬ್ದುಲ್ ಹಮೀದ್ ಮುಶ್ರೀಪ, ಎಸ್ಪಿ ಲಕ್ಷ್ಮಣ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು.