ಆಲಮೇಲ : ಮಕ್ಕಳಲ್ಲಿ ಶಿಸ್ತು, ಸಂಸ್ಕಾರ ಹಾಗೂ ದೇಶಭಕ್ತಿ ಬೆಳೆಸುವುದು ಅಗತ್ಯ : ಸಾತಿಹಾಳ
ಲೋಕದರ್ಶನ ವರದಿ
ಆಲಮೇಲ 15 : ತಾಲೂಕು ಮಕ್ಕಳ ಸಾಹಿತ್ಯ ಸಂಗಮ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ವಿಶ್ವೇಶ್ವರ ಬಾಲಭಾರತಿ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಎಸ್.ಸಾತಿಹಾಳ ರವರು, ಪಂಡಿತ್ ಜವಾಹರಲಾಲ್ ನೆಹರು ಅವರ ಮಕ್ಕಳ ಮೇಲಿನ ಪ್ರೀತಿ, ವ್ಯಕ್ತಿತ್ವ ಹಾಗೂ ಸಾರ್ಥಕ ಬದುಕನ್ನು ಸ್ಮರಿಸಿದರು. ನೆಹರು ಅವರು ಮಕ್ಕಳನ್ನು ಬಹಳವಾಗಿ ಪ್ರೀತಿಸುತ್ತಿದ್ದರು.
“ಇಂದಿನ ಮಕ್ಕಳ ಕಣ್ಣುಗಳಲ್ಲಿ ನಾಳಿನ ಭಾರತವನ್ನು ನಾನು ನೋಡುತ್ತೇನೆ” ಎಂಬ ಅವರ ಆಶಯವು ಮಕ್ಕಳ ಮಹತ್ವವನ್ನು ಸಾರುತ್ತದೆ. ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ಮಕ್ಕಳ ಭವಿಷ್ಯದ ಬಗ್ಗೆ ಅವರಿಗಿದ್ದ ಕಾಳಜಿಯನ್ನು ಸ್ಮರಿಸಲಾಗುತ್ತಿದೆ ಎಂದು ತಿಳಿಸಿದರು.
ಹ.ಮಾ. ಪೂಜಾರಿ ಹಾಗೂ ಶಂಗು ಬಿರಾದಾರ ಅವರ ಸಾಹಿತ್ಯಿಕ ಕೊಡುಗೆಗಳನ್ನು ಸ್ಮರಿಸಿದ ಅವರು, ಮಕ್ಕಳಿಗಾಗಿ ಹಲವು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ಪ್ರೇರಣಾದಾಯಕ ಅವಕಾಶಗಳನ್ನು ಕಲ್ಪಿಸಿ, ಅವರಲ್ಲಿರುವ ಸಾಹಿತ್ಯ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಕಾರ್ಯವನ್ನು ಸಂಘಟನೆಯು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದರು.
ಮಕ್ಕಳಲ್ಲಿ ಶಿಸ್ತು ಮತ್ತು ದೇಶಭಕ್ತಿಯನ್ನು ಬೆಳೆಸುವುದು ಅತ್ಯಂತ ಅವಶ್ಯಕ. ಇದಕ್ಕೆ ಜಪಾನ್ ದೇಶದ ಶಿಸ್ತು ಮತ್ತು ದೇಶಪ್ರೇಮವನ್ನು ಮಾದರಿಯಾಗಿ ವಿವರಿಸಿದರು. ಸ್ವಾಮಿ ವಿವೇಕಾನಂದರು ಜಪಾನ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈಲ್ವೆ ನಿಲ್ದಾಣದಲ್ಲಿ ಬಾಳೆಹಣ್ಣು ಬೇಕಾದಾಗ, ತಕ್ಷಣ ಸಿಗದಿರುವುದನ್ನು ಗಮನಿಸಿದ ಇಬ್ಬರು ಶಾಲಾ ಮಕ್ಕಳು ಹುಡುಕಾಡಿ ಬಾಳೆಹಣ್ಣು ತಂದುಕೊಟ್ಟರು. ಅದಕ್ಕೆ ಹಣ ನೀಡಲು ವಿವೇಕಾನಂದರು ಮುಂದಾದಾಗ ಮಕ್ಕಳು ಹಣ ಸ್ವೀಕರಿಸಲು ನಿರಾಕರಿಸಿ, “ನೀವು ನಿಮ್ಮ ದೇಶಕ್ಕೆ ಹೋದ ಮೇಲೆ ಜಪಾನ್ನಲ್ಲಿ ಬಾಳೆಹಣ್ಣು ಸಿಗಲಿಲ್ಲ ಎಂದು ಮಾತ್ರ ಹೇಳಬೇಡಿ;
ಅದೇ ನೀವು ನಮಗೆ ಕೊಡುವ ದೊಡ್ಡ ಹಣ” ಎಂದು ಹೇಳಿದ ಪ್ರಸಂಗವನ್ನು ವಿವರಿಸಿದರು. ಈ ಘಟನೆಯು ಮಕ್ಕಳಲ್ಲಿರಬೇಕಾದ ದೇಶಾಭಿಮಾನ ಮತ್ತು ಕರ್ತವ್ಯಪ್ರಜ್ಞೆಗೆ ಉತ್ತಮ ಉದಾಹರಣೆಯಾಗಿದೆ ಎಂದರು.ಮಕ್ಕಳು ತಂದೆ-ತಾಯಿಯನ್ನು ಗೌರವಿಸಬೇಕು, ಗುರುಗಳಿಗೆ ನಮಿಸಬೇಕು, ಶಿಸ್ತನ್ನು ಪಾಲಿಸಬೇಕು. ಇಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ.
ಸಂಸ್ಕಾರ, ಶಿಸ್ತು ಮತ್ತು ದೇಶಭಕ್ತಿಯ ಗುಣಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಂಡಾಗ ಮಾತ್ರ ಸುಂದರ ಸಮಾಜ ಹಾಗೂ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ವಿದ್ಯಾರ್ಥಿನಿಯಾದ ಸಮೃದ್ಧಿ ಗಣಾಚಾರಿ ಮಾತನಾಡಿ ಶಿಕ್ಷಣ ಕಲಿಯೋದರ ಜೊತೆಗೆ ಸಂಸ್ಕಾರವನ್ನು ಕಲಿಯಬೇಕು.
ಆಭರಣ.ಆಸ್ತಿ ಅಂತಸ್ತು ಇವು ಮನುಷ್ಯನಿಗೆ ಪ್ರಾಮುಖ್ಯತೆ ಕೊಡುವುದಿಲ್ಲ.ಸಂಸ್ಕಾರವನ್ನು ಪ್ರಾಮುಖ್ಯತೆ ಕೊಡುತ್ತದೆ ಎಂದು ಹೇಳಿದ ವಿದ್ಯಾರ್ಥಿ ನಿ ಈ ವೇಳೆ ಸಂಸ್ಥೆಯ ಅಧ್ಯಕ್ಷ ಎಸ್ಆಯ್.ಜೋಗೂರ,ಅರವಿಂದ ಕುಲಕರ್ಣಿ, ಜಿಲ್ಲಾ ಉಪಾಧ್ಯಕ್ಷ ಎಸ್.ಎಸ್.ಶಿವಸಿಂಪಿಗೇರ,ತಾಲೂಕು ಅಧ್ಯಕ್ಷ ಲಕ್ಷ್ಮೀಪುತ್ರ ಕಿರನಳ್ಳಿ, ರಮೇಶ ಗಂಗನಳ್ಳಿ,ಗೀತಾ ಎಸ್.ಪತ್ರಕರ್ತರು ಅಬ್ದುಲ್ ಗನಿ ದೇವರಮನಿ, ಉಮೇಶ ಕಟಬರ ,ಸಿದ್ದು ಮುಗಳಿ,ಎಸ್.ಎ.ಬಿರಾದಾರ,ಕುದರತ್ ಅಲಿ ಭೂಸನೂರ,ಮಹಾಂತೇಶ ಹಳೇಮನಿ,ಶಿಕ್ಷಕವೃಂದದವರು ಉಪಸ್ಥಿತರಿದ್ದರು