ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಗೆ ನೇಕಾರ ಪ್ರಮುಖರ ಆಗ್ರಹ : ಗೊಳಸಂಗಿ ಜಿಪಂ ಟಿಕೆಟ್ ದೇವಾಂಗ ಸಮಾಜದ ಪ್ಯಾಟಿಗೌಡ್ರ ಗೆ ನೀಡಿ
ಕೊಲ್ಹಾರ : ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಸವನ ಬಾಗೇವಾಡಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಗೆ ಬರುವ ನಿಡಗುಂದಿ ತಾಲೂಕಿನ ಗೊಳಸಂಗಿ ಜಿಪಂ ಕ್ಷೇತ್ರದಿಂದ ದೇವಾಂಗ ಸಮಾಜದ ಜಿಲ್ಲಾ ಉಪಾಧ್ಯಕ್ಷ ಹಾಗೂ ವಿಜಯಪುರ ಜಿಲ್ಲಾ ನಿಸರ್ಗ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಆರ್.ಎಸ್. ಪ್ಯಾಟಿಗೌಡ್ರ ಅವರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಬೇಕೆಂದು ವಿಜಯಪುರ ಜಿಲ್ಲಾ ದೇವಾಂಗ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.
ರಾಜ್ಯ ದೇವಾಂಗ ಸಂಘದ ಸಂಘಟನಾ ಕಾರ್ಯದರ್ಶಿ ಆನಂದ ಹುಲಿಮನಿ ಅವರ ನೇತೃತ್ವದಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರನ್ನು ಪಟ್ಟಣದ ನಿವಾಸದಲ್ಲಿ ಭೇಟಿಯಾದ ಸಮಾಜದ ಪ್ರಮುಖರು ಈ ಕುರಿತು ಮನವಿ ಸಲ್ಲಿಸಿದರು.
ಗೊಳಸಂಗಿ ಜಿಪಂ ಕ್ಷೇತ್ರವು ಹಿಂದುಳಿದ ವರ್ಗದ 2ಎ ಮೀಸಲಾತಿಗೆ ಒಳಪಟ್ಟಿದ್ದು, ಈ ವರ್ಗದಲ್ಲಿ ನೇಕಾರ ಸಮುದಾಯವೂ ಸೇರಿದೆ. ಆದರೂ ಇಲ್ಲಿಯವರೆಗೆ ನೇಕಾರ ಸಮುದಾಯಕ್ಕೆ ರಾಜಕೀಯವಾಗಿ ಸೂಕ್ತ ಪ್ರಾತಿನಿಧ್ಯ ಹಾಗೂ ಅವಕಾಶಗಳು ದೊರೆತಿಲ್ಲ.
ಹೀಗಾಗಿ ಸಮಾಜದ ಸಕ್ರಿಯ ಮುಖಂಡ, ಜನಪರ ಕಾಳಜಿಯುಳ್ಳ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಆರ್.ಎಸ್. ಪ್ಯಾಟಿಗೌಡ್ರ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಮುಖಂಡರು ಆಗ್ರಹಿಸಿದರು.
ಪ್ಯಾಟಿಗೌಡ್ರ ಅವರು ಕೇವಲ ತಮ್ಮ ಸಮುದಾಯಕ್ಕೆ ಸೀಮಿತವಾಗದೆ ಎಲ್ಲ ಸಮುದಾಯಗಳ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರಿಗೆ ಪಕ್ಷದ ಟಿಕೆಟ್ ನೀಡಿದಲ್ಲಿ ವಿಜಯಪುರ ಜಿಲ್ಲೆಯ ದೇವಾಂಗ ಸಮಾಜದ ಎಲ್ಲರೂ ಒಗ್ಗಟ್ಟಾಗಿ ಬೆಂಬಲಿಸಿ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಮುಖಂಡರು ಭರವಸೆ ವ್ಯಕ್ತಪಡಿಸಿದರು.
ಸಮಾಜದ ಮುಖಂಡರ ಮನವಿಗೆ ಸ್ಪಂದಿಸಿದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರು, ಆರ್.ಎಸ್. ಪ್ಯಾಟಿಗೌಡ್ರ ಅವರಿಗೆ ಟಿಕೆಟ್ ನೀಡುವ ವಿಚಾರವನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದ ಕೋರ್ ಕಮಿಟಿಯಲ್ಲಿ ಪ್ರಸ್ತಾಪಿಸಿ, ಟಿಕೆಟ್ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ನ ಪ್ರಬಲ ಆಕಾಂಕ್ಷಿ ಆರ್.ಎಸ್. ಪ್ಯಾಟಿಗೌಡ್ರ, ರಾಜ್ಯ ದೇವಾಂಗ ಸಂಘದ ಸಂಘಟನಾ ಕಾರ್ಯದರ್ಶಿ ಆನಂದ ಹುಲಿಮನಿ, ವಂದಾಲದ ಗುರುಪಾದ ಹಟ್ಟಿ, ತಾಲೂಕು ಬಿಜೆಪಿ ಒಬಿಸಿ ಘಟಕದ ಮುಖಂಡ ಹಾಗೂ ವಂದಾಲ ಗ್ರಾಪಂ ಮಾಜಿ ಸದಸ್ಯ ಈರಣ್ಣ ಬಳವಾಟ, ಶ್ರೀಶೈಲ ಜುಮನಾಳ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
[ ರಾಜ್ಯ ದೇವಾಂಗ ಸಂಘದ ಸಂಘಟನಾ ಕಾರ್ಯದರ್ಶಿ ಆನಂದ ಹುಲಿಮನಿ ಅವರ ನೇತೃತ್ವದಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರನ್ನು ಪಟ್ಟಣದ ನಿವಾಸದಲ್ಲಿ ಭೇಟಿಯಾದ ಸಮಾಜದ ಪ್ರಮುಖರು ಆರ್.ಎಸ್. ಪ್ಯಾಟಿಗೌಡರ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಮನವಿ ಸಲ್ಲಿಸಿದರು.]