ಜೀವವೈವಿಧ್ಯದ ಸೌಂದರ್ಯ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ; ಬಂಡೆ
ಇಂಡಿ: ಮನೆ ಗುಬ್ಬಚ್ಚಿ ಮತ್ತು ಇತರ ಸಾಮಾನ್ಯ ಪಕ್ಷಿಗಳ ಸಂರಕ್ಷಣೆಯ ಸಂದೇಶವನ್ನು ಎಲ್ಲರಿಗೂ ತಿಳಿಸಿ, ಸಾಮಾನ್ಯ ಜೀವವೈವಿಧ್ಯದ ಸೌಂದರ್ಯವನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಸೋಮವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ವಿಶ್ವ ಗುಬ್ಬಚ್ಚಿ ದಿನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು
ಎತ್ತರವಾದ ಕಟ್ಟಡಗಳು, ಹಂಚಿನ ಬದಲು ಕಾಂಕ್ರೀಟ್ನ ಮನೆಗಳಿಂದಾಗಿ ಗುಬ್ಬಚ್ಚಿಗಳಿಗೆ ವಾಸಿಸಲು ಗೂಡು ಕಟ್ಟಿಕೊಳ್ಳಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗುಬ್ಬಚ್ಚಿಗಳು ಬಿಸಿಲು, ಮಳೆ, ಗಾಳಿಗೆ ತತ್ತರಿಸಿ ಹೋಗಿವೆ, ಹೀಗಾಗಿ ಅವುಗಳು ಅಳಿವಿನಂಚಿಗೆ ಸಾಗಿವೆ. ಅವನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಬೇಕಾಗಿದೆ ಎಂದು ಹೇಳಿದರು.
ಬೇಸಿಗೆ ಅವಧಿಯಲ್ಲಿ ಮನೆಗಳ ಮುಂದೆ ಶುದ್ಧ ನೀರು ಮತ್ತು ಕಾಳನ್ನು ಇಟ್ಟು ಗುಬ್ಬಚ್ಚಿಗಳ ಜೀವ ಸಂಕುಲವನ್ನು ಉಳಿಸಬೇಕು. ತಾರಸಿ ಕಟ್ಟಡಗಳ ಬಳಿಯೂ ಗೂಡುಗಳ ಮಾದರಿಯನ್ನು ಇಟ್ಟು ಸಂರಕ್ಷಣೆಗೆ ಮುಂದಾಗಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಯೊಬ್ಬರೂ ಗುಬ್ಬಚ್ಚಿಗಳ ಬಗ್ಗೆ ಅರಿವು ಮೂಡಿಸಲು ಶ್ರಮಿಸಬೇಕು ಎಂದು ಹೇಳಿದರು.
ಶಿಕ್ಷಕ ಎಸ್.ಎಸ್. ಅರಬ ಮಾತನಾಡಿ, ಇಂದು ಜನರು ಬಳಸುವ ವೈಫೈ ಮತ್ತು ಮೊಬೈಲ್ ನೆಟ್ವರ್ಕ್ಗಳು ಮತ್ತು ಮೊಬೈಲ್ ಟವರ್ಗಳ ಸ್ಥಾಪನೆಯ ಹೆಚ್ಚಳವು ಗುಬ್ಬಚ್ಚಿಗಳ ಸಂಖ್ಯೆಯ ಕುಸಿತಕ್ಕೆ ಕಾರಣವಾಗಿದೆ. ಆದರೆ ದುರದೃಷ್ಟವಶಾತ್ ಜನರಲ್ಲಿ ಜಾಗೃತಿ ಮೂಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಶಾಲಾ ಮುಖ್ಯ ಗುರು ಎ.ಎಂ. ಬೆದ್ರೇಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷಿ ಸಂಕುಲದ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರ ಬಹು ಮುಖ್ಯ ಎಂದು ಹೇಳಿದರು.
ಶಿಕ್ಷಕರಾದ ಎಸ್.ಎಚ್. ಮೈದರಗಿ, ಎನ್.ಬಿ. ಚೌಧರಿ, ಎಸ್.ಪಿ. ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.