ಕಣ್ಣುಗಳ ಆರೋಗ್ಯದತ್ತ ಗಮನ ಹರಿಸುವುದು ಬಹಳ ಮುಖ್ಯ: ಕೋಳೆಕರ
ಇಂಡಿ: ಕೊರೊನಾ ವೈರಸ್ ಪರಿಸ್ಥಿತಿಯಿಂದಾಗಿ ಮೊಬೈಲ್ ಇಲ್ಲದೆ ಮಕ್ಕಳ ಕಲಿಕೆಯೇ ಸಾಧ್ಯವಿಲ್ಲ ಎಂಬಂತಾಗಿದೆ. ಇದರಿಂದ ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಕನ್ನಡಕ ಧರಿಸಿವಂತಾಗಬಹುದು. ಹಾಗಾಗಿ ಕಣ್ಣುಗಳ ಆರೋಗ್ಯದತ್ತ ಗಮನ ಹರಿಸುವುದು ಬಹಳ ಮುಖ್ಯ. ಆದ್ದರಿಂದ ನಿಮ್ಮ ಮತ್ತು ನಿಮ್ಮ ಮಕ್ಕಳ ಕಣ್ಣುಗಳನ್ನು ಆರೋಗ್ಯವಾಗಿಸಲು ಸಹಾಯ ಮಾಡುವಂತಹ ಕೆಲವು ಕಣ್ಣಿನ ವ್ಯಾಯಾಮಗಳ ಮಾಡುವದು ಮುಖ್ಯ ಎಂದು ಚಿಕ್ಕಮಕ್ಕಳ ತಜ್ಞ ಡಾ. ವಿಪುಲ್ ಕೋಳೆಕರ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಅರವಿಂದ ಥಿಯಾಸೊಫಿಕಲ್ ಸೊಸೈಟಿಯಿಂದ ಕೇಂದ್ರದಲ್ಲಿ ನಡೆದ ಕಣ್ಣಿಗೆ ವ್ಯಾಯಾಮಗಳು 4 ದಿನಗಳ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಅರವಿಂದ ಥಿಯಾಸಾಫಿಕಲ್ ಸೋಸೈಟ ರಾಜ್ಯ ಕಾರ್ಯದರ್ಶಿ ಅಧ್ಯಕ್ಷ ಡಾ. ಆರ್.ಜಗದೀಶ ಮಾತನಾಡಿ ತಾಂತ್ರಿಕ ಯುಗದಲ್ಲಿ ಕಣ್ಣುಗಳ ಬಗ್ಗೆ ಸರಿಯಾದ ಕಾಳಜಿ ವಹಿಸುವದು ಬಹಳ ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ ಸಂಶೋಧಕ ಡಾ. ಎಸ್.ಕೆ.ಕೊಪ್ಪಾ ಮಾತನಾಡಿ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುವದರಿಂದ ನೀವು ಕನ್ನಡಕ ಧರಿಸುವದರಿಂದಲೂ ಪರಿಹಾರ ಪಡೆಯಬಹುದು ಎಂದರು.
ನಿವೃತ್ತ ಪ್ರಾಚಾರ್ಯ ಎ.ಎಸ್.ಗಾಣಿಗೇರ ಸ್ವಾಗತಿಸಿ ನಿರೂಪಿಸಿದರು. ಪ್ರೊ.ನೀಲಪ್ಪ ಹಂಜಗಿ, ಎಸ್.ಎಮ್,ಕಡಕೋಳ, ಯೋಗ ಶಿಕ್ಷಕ ಬಿ.ಎಸ್.ಪಾಟೀಲ, ಜಿ.ವಿ.ಬಿರಾದಾರ, ಎಸ್.ಎಸ್.ಪಾಟಿಲ,ನಿವೃತ್ತ ತಹಸೀಲ್ದಾರ ಶಿವಲಿಂಗಪ್ಪ ಪಟ್ಟದಕಲ್ಲ ಸೇರಿದಂತೆ 22 ಶಿಬಿರಾರ್ಥಿಗಳು ತರಬೇತಿ ಪಡೆದರು.