ಅಂತರರಾಷ್ಟ್ರೀಯ

ಇಸ್ರೇಲ್ ಮೇಲೆ ತೈಲ ನಿರ್ಬಂಧಕ್ಕೆ ಇರಾನ್ ಕರೆ

ಇಸ್ರೇಲ್ ಮೇಲೆ ತೈಲ ನಿರ್ಬಂಧಕ್ಕೆ ಇರಾನ್ ಕರೆ

ತೆಹ್ರಾನ್‌ 18: ಇಸ್ಲಾಮಿಕ್ ರಾಷ್ಟ್ರಗಳ ಸಹಕಾರ ಒಕ್ಕೂಟದ (ಒಐಸಿ) ಸದಸ್ಯ ರಾಷ್ಟ್ರಗಳು ಇಸ್ರೇಲ್‌ನ ಮೇಲೆ ತೈಲ ಪೂರೈಕೆ ಸೇರಿದಂತೆ ಇತರ ರೀತಿಯ ನಿರ್ಬಂಧಗಳನ್ನು ವಿಧಿಸಬೇಕು. ಜತೆಗೆ, ಇಸ್ಲಾಮಿಕ್ ರಾಷ್ಟ್ರಗಳಲ್ಲಿರುವ ಇಸ್ರೇಲ್‌ನ ಎಲ್ಲ ರಾಯಭಾರಿಗಳನ್ನು ಹೊರಹಾಕುವಂತೆ ಇರಾನ್‌ನ ವಿದೇಶಾಂಗ ಸಚಿವ ಹುಸೇನ್ ಅಮಿರ್–ಅಬ್ದುಲ್ಲಾಹಿಯಾನ್ ಕರೆ ನೀಡಿದ್ದಾರೆ.

ಮಂಗಳವಾರ ತಡರಾತ್ರಿ ಗಾಜಾ ಆಸ್ಪತ್ರೆ ಮೇಲೆ ನಡೆದ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ. ಈ ಘಟನೆ ಬೆನ್ನಲ್ಲೇ ಉಲ್ಬಣಗೊಳ್ಳುತ್ತಿರುವ ಇಸ್ರೇಲ್‌ -ಪ್ಯಾಲೆಸ್ಟೀನ್ ಸಂಘರ್ಷದ ಕುರಿತು ಚರ್ಚಿಸಲು ಸೌದಿ ನಗರದ ಜೆಡ್ಡಾದಲ್ಲಿ ಒಐಸಿ ನೇತೃತ್ವದಲ್ಲಿ ತುರ್ತು ಸಭೆ ನಡೆಯುತ್ತಿದೆ.

ಇಸ್ರೇಲ್‌ನ ರಾಯಭಾರಿಗಳನ್ನು ಹೊರಹಾಕುವುದರ ಜೊತೆಗೆ ತೈಲ ನಿರ್ಬಂಧಗಳು ಸೇರಿದಂತೆ ಇಸ್ಲಾಮಿಕ್ ರಾಷ್ಟ್ರಗಳಿಂದ ಇಸ್ರೇಲ್ ಮೇಲೆ ತಕ್ಷಣದ ಮತ್ತು ಸಂಪೂರ್ಣ ನಿರ್ಬಂಧವನ್ನು ಹೇರುವಂತೆ ವಿದೇಶಾಂಗ ಸಚಿವ ಹುಸೇನ್ ಅಮಿರ್–ಅಬ್ದುಲ್ಲಾಹಿಯಾನ್ ಕರೆ ನೀಡಿದ್ದಾರೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ಯಾರಿಸ್‌: ನೂರಾರು ಮಂದಿಯ ಸಾವಿಗೆ ಕಾರಣವಾಗಿರುವ ಗಾಜಾ ಆಸ್ಪತ್ರೆ ಮೇಲಿನ ದಾಳಿಗೆ ಜಾಗತಿಕ ನಾಯಕರಿಂದ ಖಂಡನೆ ಹಾಗೂ ಆಕ್ರೋಶ ವ್ಯಕ್ತವಾಗಿದೆ. ಜೋರ್ಡನ್‌ ರಾಜಧಾನಿ ಅಮ್ಮಾನ್‌, ಟುನೇಷಿಯಾ ರಾಜಧಾನಿ ಟುನಿಸ್‌, ಲೆಬನಾನ್ ರಾಜಧಾನಿ ಬೈರೂತ್‌ ಹಾಗೂ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಟೆಹ್ರಾನ್‌ನಲ್ಲಿರುವ ಬ್ರಿಟನ್‌, ಫ್ರಾನ್ಸ್‌ ರಾಯಭಾರ ಕಚೇರಿ ಹಾಗೂ ಪ್ಯಾಲೆಸ್ಟೀನ್‌ ಸ್ಕ್ವೇರ್ ಹೊರಗಡೆ ಜಮಾಯಿಸಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೈರೂತ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮುಂದೆ ಜಾಮಾಯಿಸಿದ್ದ ಪ್ರತಿಭಟನಾಕಾರರು ಲೆಬನಾನ್‌ ಭದ್ರತಾ ಪಡೆಗಳೊಂದಿಗೆ ವಾಗ್ವಾದ ನಡೆಸಿದರು. ‘ಅಮೆರಿಕಕ್ಕೆ ಸಾವು’ ‘ಇಸ್ರೇಲ್‌ಗೆ ಸಾವು’ ಎಂದು ಘೋಷಣೆ ಕೂಗಿದ್ದಾರೆ.

ಈ ದಾಳಿಯ ಹಿಂದೆ ಇಸ್ರೇಲ್‌ ಕೈವಾಡ ಇದೆ ಎಂದು ಹಮಾಸ್‌ ಬಂಡುಕೋರರು ಆರೋಪಿಸಿದ್ದಾರೆ. ಅದರೆ ಇದು ಹಮಾಸ್‌ನ ಗುರಿ ತಪ್ಪಿದ ರಾಕೆಟ್‌ ದಾಳಿ ಎಂದು ಹೇಳಿರುವ ಇಸ್ರೇಲ್, ಹಮಾಸ್‌ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದೆ.

‘ಗಾಜಾದ ಆಸ್ಪತ್ರೆಯೊಂದರ ಮೇಲೆ ನಡೆದ ದಾಳಿಯಲ್ಲಿ ನೂರಾರು ಪ್ಯಾಲೇಸ್ಟಿನಿಯನ್ ನಾಗರಿಕರ ಹತ್ಯೆಯಿಂದ ಗಾಬರಿಗೊಂಡಿದ್ದೇನೆ’ ಎಂದು ವಿಶ್ವಸಂಸ್ಥೆಯ ಮುಖ್ಯ ಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್‌ ಹೇಳಿದ್ದಾರೆ. ಅಲ್ಲದೆ ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ನುಡಿದಿದ್ದಾರೆ.

‘ಗಾಜಾದ ಆಸ್ಪತ್ರೆ ಮೇಲೆ ಇಸ್ರೇಲ್‌ ಬಾಂಬ್‌ ದಾಳಿ ಮಾಡಿ ನೂರಾರು ಜನರನ್ನು ಕೊಂದಿರುವ ಘಟನೆಯನ್ನು ಖಂಡಿಸಲು ಶಬ್ದಗಳು ಸಿಗುತ್ತಿಲ್ಲ. ಈ ಬಗ್ಗೆ ಅಂತತರಾಷ್ಟ್ರೀಯ ಸಮುದಾಯಗಳು ಕ್ರಮ ತೆಗೆದುಕೊಳ್ಳಬೇಕು’ ಎಂದು ಆಫ್ರಿಕನ್‌ ಯೂನಿಯನ್‌ನ ಮುಖ್ಯಸ್ಥ ಮೂಸ ಫಕಿ ಮಹಮತ್‌ ಹೇಳಿದ್ದಾರೆ. ಅಲ್ಲದೆ ಇಸ್ರೇಲ್‌ ಯುದ್ಧಾಪರಾದ ಎಸಗಿದೆ ಎಂದು ಅವರು ಆರೋಪಿಸಿದ್ದಾರೆ.

ತಕ್ಷಣವೇ ಇದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿರುವ ಅರಬ್ ಲೀಗ್‌ ಮುಖ್ಯಸ್ಥ ಅಹಮದ್ ಅಬುಲ್ ಘಿಸ್ಟ್, ನಮ್ಮ ಅರಬ್ ಕಾರ್ಯವಿಧಾನಗಳು ಯುದ್ಧ ಅಪರಾಧಗಳನ್ನು ದಾಖಲಿಸುತ್ತವೆ. ಅಪರಾಧಿಗಳನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

‘ನಾಗರಿಕರೇ ತುಂಬಿದ್ದ ಆಸ್ಪತ್ರೆ ಮೇಲೆ ಬಾಂಬ್ ದಾಳಿ ಮಾಡಿದ್ದಕ್ಕೆ ಯಾವುದೇ ವಿನಾಯಿತಿ ಇಲ್ಲ. ನೈಜ ಸಂಗತಿ ಪತ್ತೆ ಮಾಡಬೇಕು. ಮತ್ತು ಕಾರಣೀಭೂತರನ್ನು ಜವಾಬ್ದಾರರನ್ನಾಗಿ ಮಾಡಬೇಕು’ ಎಂದು ಯೂರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲ ವೊನ್‌ ಡೆರ್‌ ಲೈನ್ ಹೇಳಿದ್ದಾರೆ.

‘ಮತ್ತೊಮ್ಮೆ ಅಮಾಯಕ ನಾಗರಿಕರು ದುಬಾರಿ ಬೆಲೆ ತೆತ್ತಿದ್ದಾರೆ. ಈ ಅಪಾರಾಧಕ್ಕೆ ಕಾರಣವಾದವರನ್ನು ಪತ್ತೆಮಾಡಿ, ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು’ ಎಂದು ಐರೋಪ್ಯ ಒಕ್ಕೂಟದ ವಿದೇಶಾಂಗ ವ್ಯವಹಾರಗಳ ಮುಖ್ಯ ಕಾರ್ಯರ್ಶಿ ಬೊರೆಲ್‌ ಡೆಪ್ಲೊರೆಡ್‌ ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ.

‘ಆಸ್ಪತ್ರೆಗಳು ಮಾನವ ಜೀವವನ್ನು ಸಂರಕ್ಷಿಸುವ ಅಭಯಾರಣ್ಯಗಳಾಗಿರಬೇಕು, ಸಾವು ಮತ್ತು ವಿನಾಶದ ದೃಶ್ಯಗಳಾಗಿರಬಾರದು’ ಎಂದು ಅಂತರರಾಷ್ಟ್ರೀಯ ರೆಡ್‌ಕ್ರಾಸ್‌ ಸಂಸ್ಥೆ ಹೇಳಿದೆ.

ಗಾಜಾದಲ್ಲಿ ಪರಿಸ್ಥಿತಿ ಕೈಮೀರುತ್ತಿದೆ. ಎಲ್ಲಾ ಕಡೆಗಳಿಂದಲೂ ಹಿಂಸಾಚಾರ ನಿಲ್ಲಬೇಕು’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಗೆಬ್ರಿಯೆಸಿಸ್‌ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸುದ್ದಿ ಓದಿ