ಯುರೋಪ್‌ನಾದ್ಯಂತ ಬಾಂಬ್ ಬೆದರಿಕೆ: ವಿಮಾನ ಸಂಚಾರ ಅಸ್ತವ್ಯಸ್ತ, ಯುದ್ಧವಿಮಾನಗಳ ನಿಯೋಜನೆ
ಬಲ್ಗೇರಿಯಾ, ಸೈಪ್ರಸ್, ಜೆಕ್ ಗಣರಾಜ್ಯ, ಫ್ರಾನ್ಸ್, ಹಂಗೇರಿ, ಇಟಲಿ, ಪೋರ್ಚುಗಲ್, ರೊಮೇನಿಯಾ ಹಾಗೂ ಬ್ರಿಟನ್ ಸೇರಿದಂತೆ ವಿವಿಧ ದೇಶಗಳಿಗೆ ತೆರಳುತ್ತಿದ್ದ ಅಥವಾ ಅಲ್ಲಿಂದ ಹೊರಟಿದ್ದ ಕನಿಷ್ಠ 18 ವಿಮಾನಗಳು ಬಾಂಬ್ ಬೆದರಿಕೆಯಿಂದ ತೊಂದರೆಗೊಳಗಾಗಿವೆ. ಡೆನ್ಮಾರ್ಕ್‌ನ ಕೋಪನ್‌ಹೇಗನ್ ವಿಮಾನ ನಿಲ್ದಾಣಕ್ಕೂ ಬೆದರಿಕೆ ಬಂದಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಆದರೆ ವಿಮಾನ ನಿಲ್ದಾಣದ ಕಾರ್ಯಾಚರಣೆ ಎಂದಿನಂತೆ ಮುಂದುವರಿದಿದೆ.
ಇದಕ್ಕೂ ಮೊದಲು ಮಂಗಳವಾರ ಮತ್ತು ಗುರುವಾರ ಬಂದಿದ್ದ ಬಾಂಬ್ ಬೆದರಿಕೆಗಳಿಂದ ಕನಿಷ್ಠ 35 ವಿಮಾನಗಳ ಮಾರ್ಗ ಬದಲಾವಣೆ ಅಥವಾ ತಪಾಸಣೆ ನಡೆಸಲಾಗಿತ್ತು. ವಾರದೊಳಗೆ ಎರಡನೇ ಬಾರಿ ಇಂತಹ ಘಟನೆಗಳು ಸಂಭವಿಸಿರುವುದು ಯುರೋಪ್‌ನ ವಿಮಾನಯಾನ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುವ ಸಂಘಟಿತ ಪ್ರಯತ್ನದ ಬಗ್ಗೆ ಅನುಮಾನ ಮೂಡಿಸಿದೆ.
ಯುರೋಪ್‌ನ ಹಲವು ಮಾಧ್ಯಮ ಸಂಸ್ಥೆಗಳ ವರದಿಗಳ ಪ್ರಕಾರ, ಈ ಬೆದರಿಕೆಗಳ ಹೊಣೆ ಹೊತ್ತಿರುವುದಾಗಿ ಹೇಳಿಕೊಂಡಿರುವ ಗುಂಪೊಂದು ವಿವಿಧ ಸುದ್ದಿಸಂಸ್ಥೆಗಳಿಗೆ ಇಮೇಲ್ ಕಳುಹಿಸಿ, ಸಾರಿಗೆ ವ್ಯವಸ್ಥೆಗಳ ಮೇಲೆ ಮತ್ತಷ್ಟು ದಾಳಿಗಳನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಬಾಂಬ್ ಬೆದರಿಕೆಗಳ ಹಿನ್ನೆಲೆಯಲ್ಲಿ ಹಂಗೇರಿ ಮೂರು ಬಾರಿ ಯುದ್ಧವಿಮಾನಗಳನ್ನು ನಿಯೋಜಿಸಿ ಪ್ರಯಾಣಿಕ ವಿಮಾನಗಳಿಗೆ ಬೆಂಗಾವಲು ಒದಗಿಸಿದೆ. ಬ್ರಸೆಲ್ಸ್‌ನಿಂದ ಬಲ್ಗೇರಿಯಾದ ಸೋಫಿಯಾಗೆ ತೆರಳುತ್ತಿದ್ದ ವಿಜ್ ಏರ್ ವಿಮಾನವೂ ಬೆದರಿಕೆಗೆ ಒಳಗಾಗಿತ್ತು. ಶುಕ್ರವಾರ ಬೆಳಿಗ್ಗೆ ಒಂಬತ್ತು ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿರುವುದನ್ನು ಪ್ರಾಗ್ ವಿಮಾನ ನಿಲ್ದಾಣದ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಇದೇ ವೇಳೆ, ಪೋರ್ಚುಗಲ್‌ನ ಲಿಸ್ಬನ್‌ಗೆ ಆಗಮಿಸಿದ ರಯಾನ್ಏರ್ ವಿಮಾನಕ್ಕೆ ದೂರವಾಣಿ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ತಕ್ಷಣ ಭದ್ರತಾ ಕಾರ್ಯಾಚರಣೆ ಕೈಗೊಳ್ಳಲಾಯಿತು.
ಮತ್ತೊಂದೆಡೆ, ಪ್ಯಾರಿಸ್‌ನಿಂದ ರೋಮ್‌ಗೆ ತೆರಳುತ್ತಿದ್ದ ವಿಜ್ ಏರ್ ವಿಮಾನದಲ್ಲಿ ಸ್ಫೋಟಕ ಸಾಧನ ಇರುವುದಾಗಿ ಎಚ್ಚರಿಕೆ ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ಇಟಲಿಯ ವೆನಿಸ್‌ಗೆ ತಿರುಗಿಸಲಾಯಿತು. ವಿಮಾನ ಇಳಿದ ಬಳಿಕ ಪೊಲೀಸರು ಸುತ್ತಮುತ್ತಲಿನ ಪ್ರದೇಶವನ್ನು ತೆರವುಗೊಳಿಸಿ ತಪಾಸಣೆ ನಡೆಸಿದರು.
ಸತತ ಬಾಂಬ್ ಬೆದರಿಕೆಗಳಿಂದ ಯುರೋಪ್‌ನ ವಿಮಾನಯಾನ ವ್ಯವಸ್ಥೆಯಲ್ಲಿ ಆತಂಕ ಮತ್ತು ಗೊಂದಲ ಉಂಟಾಗಿದ್ದು, ಯಾವುದೇ ಸ್ಫೋಟಕಗಳು ಪತ್ತೆಯಾಗದಿದ್ದರೂ ಭದ್ರತಾ ಸಂಸ್ಥೆಗಳು ಘಟನೆಗಳ ಕುರಿತು ತನಿಖೆ ಮುಂದುವರಿಸಿವೆ.