ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿಗೆ ನಿರಂತರ ಅಧ್ಯಯನ ಅಗತ್ಯ
ಯರಗಟ್ಟಿ 07 : ಸ್ಪರ್ಧಾತ್ಮಕಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ನಿರಂತರ ಅಧ್ಯಯನ ಅಗತ್ಯವಾಗಿದ್ದು, ಸತತ ಅಧ್ಯಯನವೇ ಯಶಸ್ಸಿನ ಮೆಟ್ಟಿಲಾಗಿದೆ ಎಂದು ಯರಗಟ್ಟಿಯ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು. ಸಮೀಪದ ತೆನಿಕೊಳ್ಳದಲ್ಲಿರುವ ಕೆ.ಎಲ್.ಇ. ಸಂಸ್ಥೆಯ ಕೃಷಿ ಹಾಗೂ ತೋಟಗಾರಿಕೆ ಮಹಾವಿದ್ಯಾಲಯದ ತೋಟಗಾರಿಕೆ ವಿದ್ಯಾರ್ಥಿಗಳಿಗೆ ಆಯೋಜಿಸಿದ
ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ ಎಂಬ ವಿಷಯದ ಕುರಿತು ಮಾತನಾಡಿದ ಅವರು ಪೊಲೀಸ್ ಪೇದೆಯಿಂದ ಜಿಲ್ಲಾಧಿಕಾರಿಗಳ ವರೆಗೆ ಎಲ್ಲ ಸರ್ಕಾರಿ ಹುದ್ದೆಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ನಡೆಯುತ್ತಿದ್ದು ವಿದ್ಯಾರ್ಥಿಗಳು ಪದವಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯನ್ನು ನಿಯಮಿತವಾಗಿ ಮಾಡಿಕೊಳ್ಳಬೇಕು.
ಈ ದಿಶೆಯಲ್ಲಿ ನಿಗದಿತ ಪಠ್ಯಕ್ರಮವನ್ನು ಆಧರಿಸಿ, ಒಳ್ಳೆಯ ಸ್ನೇಹಿತರೊಂದಿಗೆ ಸಮಯಪ್ರಜ್ಞೆ, ಶಿಸ್ತು, ಸಂಯಮ ಮತ್ತು ಆತ್ಮವಿಶ್ವಾಸಭರಿತ ವ್ಯಾಸಂಗ ಮಾಡಿದರೆ ಖಂಡಿತ ಯಶಸ್ಸು ಸಾಧ್ಯ ಎಂದು ಪ್ರತಿಪಾದಿಸಿದರು.ಮಹಾವಿದ್ಯಾಲಯದ ಡೀನರಾದ ಡಾ. ಬಸವರಾಜ್ ಬಿರಾದಾರ ಅವರು ಉಪಸ್ಥಿತರಿದ್ದರು. ಡಾ. ದಯಾನಂದ ಕುಂಬಾರ ಅವರು ನಿರೂಪಿಸಿದರು, ಡಾ. ಶಿವರಾಜ ಕೋಟಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು, ಡಾ. ಅಕ್ಷಯ್ ಅಂಗಡಿ ವಂದಿಸಿದರು.