ಒಮಾನ್ ಕರಾವಳಿಯಲ್ಲಿ ಹಡಗಿನ ಮೇಲೆ ದಾಳಿ: ಭಾರತೀಯ ನಾವಿಕ ಸಾವು, 13 ಮಂದಿ ರಕ್ಷಣೆ
14 ಮಂದಿ ಭಾರತೀಯರನ್ನು ಹೊತ್ತೊಯ್ಯುತ್ತಿದ್ದ 'ಎಂಎಸ್ವಿ ಅಲ್ ಜುಸುಫಿ' (MSV Al Jusufi) ಹಡಗಿನ ಮೇಲೆ ದಾಳಿ ನಡೆದಿದೆ. ಒಮಾನ್ ಕರಾವಳಿ ರಕ್ಷಣಾ ಪಡೆ 13 ಸಿಬ್ಬಂದಿಯನ್ನು ರಕ್ಷಿಸಿದ್ದು, ದಾಳಿಯಲ್ಲಿ ಗಾಯಗೊಂಡಿದ್ದ ಓರ್ವ ನಾವಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.
ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರು ಮೃತಪಟ್ಟ ನಾವಿಕನನ್ನು ಗುಜರಾತ್ ಮೂಲದ ಗಂಧರ್ ನಹೀಮ್ ಅಜೀಜ್ ಎಂದು ಗುರುತಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂತಾಪ ಸೂಚಿಸಿರುವ ಸೋನೋವಾಲ್, ಭಾರತೀಯ ನಾವಿಕನೊಬ್ಬ ಗಾಯಗಳಿಂದ ಮೃತಪಟ್ಟಿರುವುದು ತೀವ್ರ ದುಃಖ ತಂದಿದೆ ಎಂದು ಹೇಳಿದ್ದಾರೆ. ರಕ್ಷಿಸಲಾದ ಸಿಬ್ಬಂದಿಗೆ ನೆರವು ನೀಡಲು ಹಾಗೂ ಅವರನ್ನು ಮತ್ತು ಮೃತ ನಾವಿಕನ ಪಾರ್ಥಿವ ಶರೀರವನ್ನು ಭಾರತಕ್ಕೆ ಕರೆತರಲು ತಮ್ಮ ಸಚಿವಾಲಯ ಮತ್ತು ಒಮಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ ಎಂದು ತಿಳಿಸಿದ್ದಾರೆ.
ಹಡಗಿನ ಮೇಲೆ ದಾಳಿ ನಡೆಸಿದವರು ಯಾರು ಮತ್ತು ಯಾವ ರೀತಿಯ ವಸ್ತುವಿನಿಂದ ಹಡಗಿಗೆ ಹಾನಿಯಾಗಿದೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
ಈ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಈ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ನಿರಂತರ ದಾಳಿಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ. ಮೃತಪಟ್ಟ ನಾವಿಕನ ಕುಟುಂಬಕ್ಕೆ ಆಳವಾದ ಸಂತಾಪ ಸೂಚಿಸಿರುವ ಸಚಿವಾಲಯ, ರಕ್ಷಿಸಲಾದ 13 ಭಾರತೀಯರನ್ನು ಹಾಗೂ ಮೃತ ನಾವಿಕನ ಪಾರ್ಥಿವ ಶರೀರವನ್ನು ಆದಷ್ಟು ಬೇಗ ಭಾರತಕ್ಕೆ ಕರೆತರಲು ಒಮಾನ್ ಅಧಿಕಾರಿಗಳೊಂದಿಗೆ ಭಾರತೀಯ ರಾಯಭಾರ ಕಚೇರಿ ಸಮನ್ವಯ ಸಾಧಿಸುತ್ತಿದೆ ಎಂದು ತಿಳಿಸಿದೆ.
ಪ್ರದೇಶದಲ್ಲಿ ತಕ್ಷಣವೇ ಉದ್ವಿಗ್ನತೆ ಕಡಿಮೆಗೊಳಿಸಬೇಕು ಹಾಗೂ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಡೆಯುತ್ತಿರುವ ಮಾತುಕತೆಗಳನ್ನು ಪೂರ್ಣಗೊಳಿಸಬೇಕು ಎಂದು ಭಾರತ ಆಗ್ರಹಿಸಿದೆ. ಈ ಮೂಲಕ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮರುಸ್ಥಾಪನೆಯಾಗಬೇಕು ಎಂದು ಸಚಿವಾಲಯ ಹೇಳಿದೆ.
"ವಾಣಿಜ್ಯ ಹಡಗುಗಳು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸುವ ದಾಳಿಗಳು ಅಂತ್ಯಗೊಳ್ಳಬೇಕು. ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ಮುಕ್ತ ಮತ್ತು ನಿರ್ಬಂಧರಹಿತ ಸಂಚಾರ ಹಾಗೂ ವ್ಯಾಪಾರಕ್ಕೆ ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಆದಷ್ಟು ಬೇಗ ಅವಕಾಶ ಕಲ್ಪಿಸಬೇಕು" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.