ಪಾಲಿಕೆ ವಲಯ ಕಚೇರಿಗಳಲ್ಲಿ ಏಜೆಂಟರ ಹಾವಳಿ ತಡೆಗೆ ಕ್ರಮ ಕೈಗೊಳ್ಳಿ: ರಮೇಶ ಮೈಲುಗೋಳ
ಮಂಗಳವಾರ ಮಹಾನಗರ ಪಾಲಿಕೆಯಲ್ಲಿ ನಡೆದ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಿತಿ ಸದಸ್ಯರು, ನಗರಸೇವಕರು ಹಾಗೂ ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸರಿಯಾದ ದಾಖಲೆಗಳೊಂದಿಗೆ ಮಧ್ಯವರ್ತಿಗಳ ಸಹಾಯವಿಲ್ಲದೆ ಕಚೇರಿಗೆ ಬರುವ ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡದೆ ಶೀಘ್ರವಾಗಿ ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಂಬಂಧಿಸಿದ ಸಿಬ್ಬಂದಿ ವಿಶೇಷ ಗಮನ ಹರಿಸಬೇಕು ಎಂದು ಅವರು ಸೂಚಿಸಿದರು.
ಉಪಮಹಾಪೌರ ಹನುಮಂತ ಕೊಂಗಾಲಿ ಅವರು ಅಶೋಕನಗರದ ಬ್ಯಾಡ್ಮಿಂಟನ್ ಕೋರ್ಟ್ ಕಟ್ಟಡದ ವಾರ್ಷಿಕ ನಿರ್ವಹಣಾ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಬಾಕಿ ಮೊತ್ತವನ್ನು ಬಡ್ಡಿ ಸಹಿತ ವಸೂಲಿ ಮಾಡುವುದು ಹಾಗೂ ಹೊಸ ಒಡಂಬಡಿಕೆ ಮಾಡಿಕೊಳ್ಳುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಚರ್ಚಿಸಿದರು.
ಸಮಿತಿ ಸದಸ್ಯ ಬ್ರಹ್ಮಾನಂದ ಮಿರಜಕರ್ ಅವರು ಬಾಪಟಗಲ್ಲಿಯ ಕಾರು ಪಾರ್ಕಿಂಗ್ ಗುತ್ತಿಗೆ ಅವಧಿ ಮುಗಿದ ನಂತರ ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಕೇಳಿದರು. ಅಧಿಕಾರಿಗಳು ನೀಡಿದ ಉತ್ತರದಿಂದ ಅವರು ತೃಪ್ತರಾಗದ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೇಕರ ಮಧ್ಯಪ್ರವೇಶಿಸಿ, ಈ ಕುರಿತು ಸಮಗ್ರ ಮಾಹಿತಿ ಹಾಗೂ ಸಂಬಂಧಿಸಿದ ಸಿಬ್ಬಂದಿಯೊಂದಿಗೆ ಮುಂದಿನ ಸಭೆಗೆ ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿದರು.
ಆನ್ಲೈನ್ ಆಸ್ತಿ ತೆರಿಗೆ ತಂತ್ರಾಂಶ ನಿರ್ವಹಿಸುತ್ತಿರುವ ಸಾಫ್ಟ್ವೇರ್ ಕಂಪನಿಯ ವಾರ್ಷಿಕ ನಿರ್ವಹಣಾ ಅವಧಿ ವಿಸ್ತರಣೆ, ಇ-ಆಸ್ತಿ ಕಡತಗಳ ಅನುಮೋದನೆ ವಿಳಂಬ ಹಾಗೂ ಸಹ್ಯಾದ್ರಿ ನಗರದ ಸಾರ್ವಜನಿಕ ಉದ್ಯಾನವನಕ್ಕೆ 'ವೀರ ಸಾವರ್ಕರ್ ಉದ್ಯಾನವನ' ಎಂದು ನಾಮಕರಣ ಮಾಡುವ ಪ್ರಸ್ತಾವನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಕೆಲವು ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇನ್ನು ಕೆಲವು ವಿಷಯಗಳನ್ನು ಮುಂದಿನ ಸಭೆಯಲ್ಲಿ ಮಂಡಿಸುವಂತೆ ಸೂಚಿಸಲಾಯಿತು.
ಮೇಯರ್ ಪ್ರೀತಿ ಕಾಮಕರ್ ಮಾತನಾಡಿ, ನಗರದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನದ ಅಗತ್ಯವಿರುವುದರಿಂದ ಆಸ್ತಿ ತೆರಿಗೆ ವಸೂಲಿಗೆ ಆದ್ಯತೆ ನೀಡಬೇಕು. ತೆರಿಗೆ ಸಂಗ್ರಹ ಹೆಚ್ಚಿಸುವ ಮೂಲಕ ಪಾಲಿಕೆಯ ಆದಾಯ ವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಶಂಕರ ಪಾಟೀಲ, ರವಿರಾಜ್ ಸಂಬ್ರೇಕರ್, ದೀಪಾಲಿ ಟೋಪಗಿ, ಮೋದಿನಸಾಬ್ ಮತವಾಲೆ, ಬಸವರಾಜ ಮೋದಗೆೇಕರ್, ನಗರಸೇವಕರು, ಕಂದಾಯ ಶಾಖೆಯ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ, ಆಡಳಿತ ಶಾಖೆಯ ಉಪ ಆಯುಕ್ತ ಉದಯಕುಮಾರ ಬಿ.ಟಿ., ಪರಿಷತ್ ಕಾರ್ಯದರ್ಶಿ ರಮೇಶ ಬಡಿಗೇರ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.