ಬೆಳಗಾವಿ

ತಾಂತ್ರಿಕ ಯುಗದಲ್ಲಿ ಮಾನವೀಯ ಸಂಬಂಧಗಳು ಕಳಚಿಹೋಗುತ್ತಿವೆ: ಚನ್ನರಾಜ ಹಟ್ಟಿಹೊಳಿ

ತಾಂತ್ರಿಕ ಯುಗದಲ್ಲಿ ಮಾನವೀಯ ಸಂಬಂಧಗಳು ಕಳಚಿಹೋಗುತ್ತಿವೆ: ಚನ್ನರಾಜ ಹಟ್ಟಿಹೊಳಿ

ಬೆಳಗಾವಿ 03: ಇಂದಿನ ತಾಂತ್ರಿಕ ಯುಗದಲ್ಲಿ ಮಾನವೀಯ ಸಂಬಂಧಗಳು ಕಳಚಿಹೋಗುತ್ತಿದ್ದು, ಹಿರಿಯರಿಗೆ ಪ್ರೀತಿ, ನೆಮ್ಮದಿ ಮತ್ತು ಗೌರವ ನೀಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ವಿಷಾದಿಸಿದರು.

ಮಂಗಳವಾರ ಬೆನಕನಹಳ್ಳಿಯಲ್ಲಿ ಸ್ವಾಮಿ ಛಾಯಾ ಪ್ರತಿಷ್ಠಾನದ ಘರಕುಲ ವೃದ್ಧಾಶ್ರಮದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ನಿಜವಾದ ಶ್ರೀಮಂತಿಕೆಯನ್ನು ಅಳೆಯಬೇಕಾದದ್ದು ಅದು ತನ್ನ ಹಿರಿಯರನ್ನು ಎಷ್ಟು ಗೌರವದಿಂದ ನೋಡಿಕೊಳ್ಳುತ್ತದೆ ಎಂಬುದರ ಆಧಾರದ ಮೇಲೆ. ಹಿರಿಯರು ಕುಟುಂಬದ ಆಸ್ತಿ ಮಾತ್ರವಲ್ಲ, ಸಮಾಜದ ಅನುಭವದ ಸಂಪತ್ತು. ಅವರು ಜೀವನದಲ್ಲಿ ಎದುರಿಸಿದ ಸವಾಲುಗಳು, ಕಂಡ ಏಳುಬೀಳುಗಳು ಮತ್ತು ಕಲಿಸಿದ ಮೌಲ್ಯಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ಹೇಳಿದರು.

ಸೇವೆ ಎಂದರೆ ಕೇವಲ ಹಣಕಾಸಿನ ನೆರವು ನೀಡುವುದಷ್ಟೇ ಅಲ್ಲ. ಹಿರಿಯರೊಂದಿಗೆ ಸಮಯ ಕಳೆಯುವುದು, ಅವರ ಕೈ ಹಿಡಿಯುವುದು, ಪ್ರೀತಿಯಿಂದ ಮಾತನಾಡುವುದು ಮತ್ತು ಅಗತ್ಯವಿದ್ದಾಗ ನೆರವಾಗುವುದೂ ಸೇವೆಯೇ ಆಗಿದೆ. ಸಮಾಜಕ್ಕೆ ದಿಕ್ಕು ತೋರಿಸಲು ಹಿರಿಯರ ಅನುಭವ ಅತ್ಯಗತ್ಯ. ಅವರು ನಮ್ಮ ಅಮೂಲ್ಯ ಆಸ್ತಿ ಎಂದು ಅಭಿಪ್ರಾಯಪಟ್ಟರು.

ಘರಕುಲ ವೃದ್ಧಾಶ್ರಮಕ್ಕೆ ಪ್ರತಿ ವರ್ಷ ತಮ್ಮಿಂದಾದ ಸೇವೆ ಸಲ್ಲಿಸುತ್ತಿದ್ದು, ಇದನ್ನು ಸಹಾಯವೆಂದು ಪರಿಗಣಿಸದೆ ಕರ್ತವ್ಯವೆಂದು ಭಾವಿಸಿದ್ದೇವೆ. 2001ರಲ್ಲಿ ತಿಲಕವಾಡಿಯ ಸಣ್ಣ ಬಾಡಿಗೆ ಮನೆಯಲ್ಲಿ ಕೇವಲ ಮೂವರು ಹಿರಿಯರೊಂದಿಗೆ ಆರಂಭವಾದ ಘರಕುಲದ ಸೇವೆ, ಇಂದು ಬೆನಕನಹಳ್ಳಿಯ ವಿಶಾಲ ಪರಿಸರದಲ್ಲಿ ಅನೇಕ ಹಿರಿಯರಿಗೆ ಆಶ್ರಯ ನೀಡುತ್ತಿರುವುದು ದೊಡ್ಡ ಸಾಧನೆಯಾಗಿದೆ ಎಂದರು.

ಹಿರಿಯರನ್ನು ನೋಡಿಕೊಳ್ಳುವುದು ಹೊರೆಯಲ್ಲ, ಅದು ನಮ್ಮ ಸಂಸ್ಕಾರ, ಕೃತಜ್ಞತೆ ಮತ್ತು ಮಾನವೀಯತೆಯ ಪ್ರತಿಬಿಂಬ. ಘರಕುಲದಲ್ಲಿ ಹಿರಿಯರ ನೆಮ್ಮದಿಯ ಬದುಕಿಗೆ ಅಗತ್ಯವಾದ ವಸತಿ, ಆಹಾರ, ಆರೋಗ್ಯ ಆರೈಕೆ, ವೈದ್ಯಕೀಯ ತಪಾಸಣೆ, ಧ್ಯಾನ, ವಾಯುವಿಹಾರ, ಮನರಂಜನೆ ಹಾಗೂ ಹಬ್ಬ-ಹರಿದಿನಗಳ ಆಚರಣೆಗೆ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ. ವಿಶೇಷವಾಗಿ ಹಿರಿಯರ ಆರೋಗ್ಯದ ಬಗ್ಗೆ ತೋರುತ್ತಿರುವ ಕಾಳಜಿ ಮೆಚ್ಚುವಂತಹದ್ದು ಎಂದು ಪ್ರಶಂಸಿಸಿದರು.

ಗೌರವ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ಸಚಿನ್ ಸಬ್ನಿಸ್ ಮಾತನಾಡಿ, 25 ವರ್ಷಗಳಿಂದ ಹಿರಿಯರ ಸೇವೆ ಮಾಡುತ್ತಿರುವುದು ಸಣ್ಣ ಸಾಧನೆಯಲ್ಲ. ಹಿರಿಯರ ಸೇವೆ ದೇವರ ಸೇವೆಗೆ ಸಮಾನ. ಅವರು ಜ್ಞಾನದ ಭಂಡಾರವಾಗಿದ್ದು, ಅವರ ಅನುಭವಗಳು ಜೀವನಕ್ಕೆ ದಾರಿದೀಪವಾಗಿವೆ. ಹಿರಿಯರು ನಮ್ಮಿಂದ ಹೆಚ್ಚಿನದನ್ನು ನಿರೀಕ್ಷಿಸುವುದಿಲ್ಲ. ಅವರೊಂದಿಗೆ ಸ್ವಲ್ಪ ಸಮಯ ಕಳೆಯುವುದೇ ಅವರಿಗೆ ನೀಡುವ ದೊಡ್ಡ ಗೌರವ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಅನಿಲ ಪೋತದಾರ ಅವರು ಘರಕುಲ ವೃದ್ಧಾಶ್ರಮ ಆರಂಭವಾದ ಸಂದರ್ಭ, ಅದರ ಹಿಂದಿನ ತ್ಯಾಗ ಮತ್ತು 25 ವರ್ಷಗಳ ಸೇವಾ ಪಯಣವನ್ನು ವಿವರಿಸಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಕಳುಹಿಸಿದ ಸಂದೇಶವನ್ನು ಈ ಸಂದರ್ಭದಲ್ಲಿ ಓದಲಾಯಿತು. ರಜತ ಮಹೋತ್ಸವದ ಅಂಗವಾಗಿ ಪ್ರಕಟಿಸಲಾದ ಸ್ಮರಣ ಸಂಚಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು.

ವೈಷ್ಣವಿ ನಾಡಗೌಡ ಸ್ವಾಗತ ಗೀತೆ ಹಾಡಿದರು. ಸ್ವಾಮಿ ಛಾಯಾ ಪ್ರತಿಷ್ಠಾನದ ಅಧ್ಯಕ್ಷ ರಾಜೀವ್ ಪೋತದಾರ ಆಶ್ರಮದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಶೈಲಾ ಚಾಟೆ ಮತ್ತು ಚಿಂತಾಮಣಿ ಗ್ರಾಮೋಪಾಧ್ಯೆ ಅತಿಥಿಗಳನ್ನು ಪರಿಚಯಿಸಿದರು. ಲಕ್ಷ್ಮೀ ಪೋತದಾರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಎನ್.ಬಿ. ದೇಶಪಾಂಡೆ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಸುದ್ದಿ ಓದಿ