ಬೆಳಗಾವಿ

ಎಂಇಎಸ್‌ಗೆ ಕಪ್ಪು ದಿನ ಆಚರಣೆಗೆ ಅವಕಾಶ: ಜಿಲ್ಲಾಡಳಿತದ ವಿರುದ್ಧ ಕನ್ನಡ ಸಂಘಟನೆಗಳ ಆಕ್ರೋಶ

ಎಂಇಎಸ್‌ಗೆ ಕಪ್ಪು ದಿನ ಆಚರಣೆಗೆ ಅವಕಾಶ: ಜಿಲ್ಲಾಡಳಿತದ ವಿರುದ್ಧ ಕನ್ನಡ ಸಂಘಟನೆಗಳ ಆಕ್ರೋಶ

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದಂದು ಮಹಾರಾಷ್ಟ್ರ ಏಕೀಕರಣ ಸಮಿತಿಗೆ (ಎಂಇಎಸ್) ಕಪ್ಪು ದಿನ ಆಚರಿಸಲು ಅವಕಾಶ ನೀಡಿದ ಬೆಳಗಾವಿ ಜಿಲ್ಲಾಡಳಿತದ ಕ್ರಮವನ್ನು ಸಮಾನ ಮನಸ್ಕ ಕನ್ನಡ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ಸೋಮವಾರ ಸಂಜೆ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಡಳಿತದ ವಿರುದ್ಧ ಕನ್ನಡ ಸಂಘಟನೆಗಳ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಕ್ಟೋಬರ್ 8ರಂದು ನಡೆದ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಕಪ್ಪು ದಿನ ಆಚರಣೆಗೆ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟ ಭರವಸೆ ನೀಡಿದ್ದರು. ಆದರೆ, ಈ ಭರವಸೆಗೆ ವಿರುದ್ಧವಾಗಿ ಜಿಲ್ಲಾಡಳಿತ ನಡೆದುಕೊಂಡಿದೆ. ಕನ್ನಡ ಸಂಘಟನೆಗಳಿಗೆ ನೀಡಿದ ಮಾತನ್ನು ಉಳಿಸಿಕೊಳ್ಳುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಸಂಘಟನೆಗಳು ಹೋರಾಟ ನಡೆಸಿದಾಗ ಕಾರ್ಯಕರ್ತರನ್ನು ಬಂಧಿಸಲು ಮುಂದಾಗುವ ಪೊಲೀಸರು, ಎಂಇಎಸ್‌ಗೆ ಮೆರವಣಿಗೆ ನಡೆಸಲು ಅವಕಾಶ ನೀಡಿದ್ದಲ್ಲದೆ, ಭದ್ರತೆಯನ್ನೂ ಒದಗಿಸಿದ್ದಾರೆ. ನಾಡದ್ರೋಹಿ ಸಂಘಟನೆಗೆ ಜಿಲ್ಲಾಡಳಿತ ಸಹಕಾರ ನೀಡಿರುವುದು ನಾಡದ್ರೋಹದ ಕೃತ್ಯಕ್ಕೆ ಸಮಾನವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಇದೇ ವೇಳೆ, ಕಳೆದ ಒಂದು ತಿಂಗಳಿಂದ ಗೋವಾದಲ್ಲಿ ಕನ್ನಡಿಗರ ಲಾರಿ ಮಾಲೀಕರು ಮತ್ತು ಚಾಲಕರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸಭೆ ತೀವ್ರವಾಗಿ ಖಂಡಿಸಿತು. ಕರ್ನಾಟಕ ಪ್ರವೇಶಿಸುವ ಗೋವಾ ರಾಜ್ಯದ ಲಾರಿಗಳ ವಿರುದ್ಧ ಕನ್ನಡ ಸಂಘಟನೆಗಳು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.

ಮುಂದಿನ ವರ್ಷ ಗೋವಾದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಲ್ಲಿನ ನಾಲ್ಕು ಲಕ್ಷ ಕನ್ನಡಿಗರ ಮತಗಳನ್ನು ಯಾಚಿಸಲು ತೆರಳುವ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಕನ್ನಡಿಗರ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು ಎಂದು ಸಭೆ ಆಗ್ರಹಿಸಿತು.

ಅಶೋಕ ಚಂದರಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹಾದೇವ ತಳವಾರ, ಬಲರಾಮ ಮಾಸೇನಟ್ಟಿ, ಮಲ್ಲಪ್ಪ ಗುಡಗೇನಟ್ಟಿ, ಸಾಗರ ಬೋರಗಲ್ಲ, ವಂದನಾ ಹೊರಕೇರಿ, ಸ್ಮಿತಾ ಪೂಜಾರಿ, ಆನಂದ ಬಿಲಾವರ ಹಾಗೂ ಎಚ್.ಐ. ತಿಮ್ಮಾಪುರ ಸೇರಿದಂತೆ ಹಲವರು ಮಾತನಾಡಿದರು.

ಸುದ್ದಿ ಓದಿ