ಗದಗ

ಸಾಮೂಹಿಕ ಪ್ರಾರ್ಥನೆಯಿಂದ ಸಮಾಜದಲ್ಲಿ ಧಾರ್ಮಿಕ ಜಾಗೃತಿ

ಸಾಮೂಹಿಕ ಪ್ರಾರ್ಥನೆಯಿಂದ ಸಮಾಜದಲ್ಲಿ ಧಾರ್ಮಿಕ ಜಾಗೃತಿ

ಗದಗ 01:  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಸಾಕಷ್ಟು ಜನರು ಹೊಸದಾಗಿ ಬದುಕು ಕಟ್ಟಿಕೊಂಡಿದ್ದಾರೆ ಎಂದು  ಜಿಲ್ಲಾ ಜನ ಜಾಗೃತಿಯ ವೇದಿಕೆಯ ಉಪಾಧ್ಯಕ್ಷರಾದ ಚಂದ್ರಶೇಖರ ಹುಣಸಿಕಟ್ಟಿ ಅವರು ಹೇಳಿದರು.  

ಬೆಟಗೇರಿಯ ಹಳೆಯ ಬನಶಂಕರಿ ದೇವಸ್ಥಾನದ ಆವರಣದಲ್ಲಿರುವ ಶ್ರೀ ಹಳೆ ಬನಶಂಕರಿ ದೇವಿ ಸಮುದಾಯ ಭವನದಲ್ಲಿ  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ  ಬಿ.ಸಿ.ಟ್ರಸ್ಟ್‌ ಗದಗ  ಹಾಗೂ  ಬೆಟಗೇರಿ ವಲಯದ ಪ್ರಗತಿ ಬಂದು ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದಿಂದ ಹಮ್ಮಿಕೊಂಡ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿ,  ಧರ್ಮಸ್ಥಳ ಸಂಘದ ನಡೆಯುವ ಮದ್ಯವರ್ಜನೆ ಶಿಬಿರದಿಂದ ಲಕ್ಷಾಂತರ ವ್ಯಸನಿಗಳು ದುಶ್ಚಟದಿಂದ ಹೊರಬಂದು ಉತ್ತಮ ಜೀವನ ನಡೆಸುತ್ತಿದ್ದಾರೆ. ಅಲ್ಲದೆ, ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಹಲವಾರು ಯೋಜನೆಗಳನ್ನು  ಅನುಷ್ಠಾನಗೊಳಿಸುವ ಮೂಲಕ ಸಶಕ್ತ ಸದೃಡ ಸಮಾಜ ನಿರ್ಮಾಣಕ್ಕೆ ಮುನ್ನೂಡಿ ಬರೆದಿದ್ದಾರೆ ಎಂದು ಹೇಳಿದರು.  

ಗದಗ ತಾಲ್ಲೂಕಾ ಯೋಜನಾಧಿಕಾರಿ ಉಮಾ ಎನ್‌.ಜಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ,  ಧರ್ಮಸ್ಥಳ ಗ್ರಾಮಾಭಿವೃದ್ದಿ  ಸಂಘದ ಹಲವಾರು ಚಟುವಟಿಕೆಯಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಒಂದು. ಮನೆಯಲ್ಲಿ ಪೂಜೆ ಮಾಡುವದಕ್ಕೂ ಮತ್ತು  ಸಾಮೂಹಿಕವಾಗಿ ಪೂಜೆ ಮಾಡುವದಕ್ಕೂ ವ್ಯತ್ಯಾಸವಿದೆ. ಸಾಮೂಹಿಕ ಪ್ರಾರ್ಥನೆಗೆ ದೇವರು ಒಲಿದು ಬರುತ್ತಾನೆ. ಮದ್ಯವ್ಯಸನ ಮುಕ್ತ ಸಮಾಜಕ್ಕಾಗಿ ಗ್ರಾಮಾಭಿವೃದ್ದಿ  ಸಂಘ ಸಾಕಷ್ಟು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಇತ್ತೀಚಿಗೆ ರಾಜ್ಯಾದ್ಯಂತ ಹಮ್ಮಿಕೊಂಡ ಸ್ವಾಸ್ಥ-್ಯ ಕಾರ್ಯಕ್ರಮದಲ್ಲಿ  ಒಂದೆ ಸಮಯಕ್ಕೆ ಲಕ್ಷಾಂತರ ವಿದ್ಯಾರ್ಥಿಗಳಿಗೆ  ಪೂಜ್ಯರಾದ ವಿರೇಂದ್ರ ಹೆಗ್ಗಡೆ ಅವರು  ಹಿತನುಡಿಗಳೊಂದಿಗೆ ಆಶೀರ್ವಚನ ನೀಡಿರುವುದು ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದು ಹೇಳಿದರು. 

ವೇದಿಕೆ ಮೇಲೆ  ಸದ್ಗುರು ಮುಕ್ಕಣ್ಣೆಶ್ವರ ಶ್ರೀಮಠದ ಪೂಜ್ಯಶ್ರೀ  ಶಂಕರಾನಂದ ಸ್ವಾಮಿಗಳು, ಹಳೇ ಬನಶಂಕರಿ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ರಾಜೇಂದ್ರ ಬರದ್ವಾಡ, ಸಾಮಾಜಿಕ ಕಾರ್ಯಕರ್ತರಾದ  ಗಣೇಶಂಗ್ ಬ್ಯಾಳಿ, ಜಿಲ್ಲಾ ಜನಜಾಗೃತಿ ಸದಸ್ಯರಾದ ಜಯದೇವ ಭಟ್,  ವೆಂಕಟೇಶ ಇಮರಾಪೂರ, ಶ್ರೀಮತಿ ಪ್ರೇಮ ಕಡೆಮನಿ, ಶ್ರೀಮತಿ ಶಿವಲೀಲಾ ಅಕ್ಕಿ, ಮಹಿಳಾ ಉದ್ಯಮಿ ನಿರ್ಮಲಾ ಕೊಳ್ಳಿ, ಕರವೇ ಜಿಲ್ಲಾಧ್ಯಕ್ಷ  ಹನುಮಂತಪ್ಪ ಅಬ್ಬಿಗೇರಿ, ನಗರಸಭೆಯ ಅಭಿಯಂತರಾದ ಲಕ್ಷ್ಮಣ ಜೋಗದಂಡಕರ, ಸಿ.ಜಿ.ಹಿರೇಮಠ, ಬೆಟಗೇರಿ ವಲಯದ ಮೇಲ್ವಿಚಾರಕ ಪ್ರಕಾಶ ನಾಯಕ, ನಾಗಸಮುದ್ರ ವಲಯದ ಮೇಲ್ವಿಚಾರಕ ಮಲ್ಲಿಕಾರ್ಜುನಗೌಡ ಸಂಕನಗೌಡ್ರ ಸೇರಿದಂತೆ ನಾಗಸಮುದ್ರ ಮತ್ತು ಬೆಟಗೇರಿ ವಲಯದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. 

ಇದಕ್ಕೂ ಮುನ್ನ ಬೆಳಿಗ್ಗೆ ಸಾವಿರಾರು ಮಹಿಳೆಯರಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಅದ್ದೂರಿಯಾಗಿ ಜರುಗಿತು. 


ಸುದ್ದಿ ಓದಿ