ಇಂಡಿ

ಪ್ರಾಥಮಿಕ ಶಾಲೆಯಲ್ಲಿ ವಿದ್ಯಾ ಪ್ರವೇಶ ಕೊಠಡಿಯ ಉದ್ಘಾಟನೆ

ಪ್ರಾಥಮಿಕ ಶಾಲೆಯಲ್ಲಿ ವಿದ್ಯಾ ಪ್ರವೇಶ ಕೊಠಡಿಯ ಉದ್ಘಾಟನೆ

ಇಂಡಿ09: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಎರಡೂವರೆ ವರ್ಷಗಳಿಂದ ಮಕ್ಕಳು ಕಲಿಕೆಯಿಂದ ಹಿಂದುಳಿದಿರುವುದು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 3 ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರವೇಶ ಎಂಬ ಕಾರ‌್ಯಕ್ರಮ ಜಾರಿಗೆ ತರಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ ಎಂದು ಶಿಕ್ಷಣ ಇಲಾಖೆಯು ಇಸಿಒ ನವಾಜ ಖಾನ ಹೇಳಿದರು. 

ಸೋಮವಾರ ತಾಲೂಕಿನ ಹಿರೇಮಸಳಿ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾ ಪ್ರವೇಶ ಕೊಠಡಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. 

ಕೋವಿಡ್‌ನಿಂದ ಎರಡು ವರ್ಷಗಳ ಕಾಲ ಮಕ್ಕಳಿಗೆ ಭೌತಿಕ ತರಗತಿ ಇಲ್ಲದೆ, ಕಲಿಕೆಯಲ್ಲಿ ಹಿನ್ನಡೆಯಾಗಿದೆ ಎಂದು ವಿವಿಧ ಸಮೀಕ್ಷೆಗಳಿಂದ ತಿಳಿದು ಬಂದಿದೆ.  ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಮೊದಲ ಮೂರು ತಿಂಗಳು 'ವಿದ್ಯಾ ಪ್ರವೇಶ' ಕಾರ‌್ಯಕ್ರಮ ಜಾರಿ ಮಾಡಲಾಗಿದೆ. ಹಾಡು, ಕಥೆ, ನಾಟಕ ಮೊದಲಾದ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಶಾಲೆ ಬಗ್ಗೆ ಆಸಕ್ತಿ ಮೂಡಿಸಲಾಗುವುದು. ಹಾಗೆಯೇ 4 ರಿಂದ 9 ನೇ ತರಗತಿಯ ಮಕ್ಕಳ ಕಲಿಕಾ ಅಂತರ ಸರಿದೂಗಿಸಲು, ಹಿಂದಿನ 2 ವರ್ಷಗಳ ಕಲಿಕಾಂಶಗಳು ಮತ್ತು ಆಯಾ ತರಗತಿಯ ಕಲಿಕಾಂಶಗಳ ಜೊತೆ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಕೌಶಲ್ಯಗಳನ್ನು ಸೇರಿಸಿಕೊಂಡು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಇಡೀ ವರ್ಷ ನಡೆಸಲಾಗುತ್ತದೆ. ಶಾಲೆಯ ಸಹ ಶಿಕ್ಷಕರಾದ ಅಬುತಾಲಿಬ ಹೂಸುರ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಎಲ್ಲಾ ಸಾಮಗ್ರಿ ಒದಗಿಸಿ ಮಕ್ಕಳ ಕಲಿಕೆಗೆ ಸಹಾಯ ಮಾಡಿದ್ದಾರೆ ಅವರ ಈ ಕಾರ್ಯ ಶ್ಲಾಘನೀಯ ಎಂದರು. 

ಈ ಸಂದರ್ಭದಲ್ಲಿ  ಸಿ.ಆರ್‌.ಪಿ. ಪ್ರವೇಜ್ ಪಟೇಲ್, ಸಿ.ಆರ್‌.ಪಿ. ಚಪ್ಪರಬಂದ, ಶಾಹುಸೇನ ಮಕಾನದಾರ, ಪಯಾಜ್ ಚೌದರಿ, ಶಿಕ್ಷಕರ ಸಂಘದ  ನಿರ್ದೇಶಕ ಅಲ್ತಾಫ ಬೋರಾಮಣಿ, ಉಮರ ಶೇಖ್,  ಮಹಮ್ಮದ್ ಗುಲಬರ್ಗಾ, ನೂರ ಅಹ್ಮದ್ ಮುಲ್ಲಾ,  ಎಸ್‌.ಡಿ.ಎಂ.ಸಿ ಅಧ್ಯಕ್ಷ ಬಶೀರ ಮುಲ್ಲಾ, ಮುಖ್ಯ ಗುರು ಎಮ್‌.ಎ. ಬೇಗ್, ಸೇರಿದಂತೆ ಗ್ರಾಮದ ಹಿರಿಯರು ಇದ್ದರು. 


ಸುದ್ದಿ ಓದಿ