ಪರಿಸರ ಸ್ನೆಹಿ ಗ್ರಾಹಕರಿಗೆ ಗೌರವ ಸನ್ಮಾನ
ತಾಳಿಕೋಟೆ 12: ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆಯನ್ನು ನಿಧಾನಕ್ಕೆ ಕಡಿಮೆಗೊಳಿಸಿ ಪರ್ಯಾಯವಾದವುಗಳನ್ನು ಬಳಸುವ ರೂಢಿ ಮಾಡಿಕೊಳ್ಳಬೇಕು. ಹೊರಗೆಲ್ಲಿಯೆ ಹೋಗುವಾಗಲೂ ಜೊತೆಗೊಂದು ಬಟ್ಟೆ ಚೀಲ ಇರಲಿ, ಅದರಲ್ಲಿಯೆ ಮನೆಗೆ ಬೇಕಾದವುಗಳನ್ನು ತನ್ನಿರಿ ಎಂದು ಎಸ್.ಕೆ.ಕಾಲೇಜಿನ ನಿವೃತ್ತ ಪ್ರಾಚಾರ್ಯ ಆರಿ್ವ.ಜಾಲವಾದಿಯವರು ಹೇಳಿದರು.
ಪಟ್ಟಣದ ಹೆಸ್ಕಾಂ ಪಕ್ಕದಲ್ಲಿರುವ ಆಯುಷ್ ಶಾಪಿಂಗ್ ಮಾಲ್ ವತಿಯಿಂದ ಆಯೋಜಿಸಿದ್ದ ಪ್ಲಾಸ್ಟಿಕ್ ಚೀಲ ಬಯಸದ ಪರಿಸರ ಸ್ನೇಹಿ ಗ್ರಾಹಕರ ಸನ್ಮಾನ ಕಾರ್ಯಕ್ರಮದಲ್ಲಿ ಮಂಗಳವಾರ ಸನ್ಮಾನಿತರಾಗಿ ಮಾತನಾಡಿದರು. ಪ್ಲಾಸ್ಟಿಕ್ ನಿಂದಾಗುವ ಹಾನಿಯ ಬಗ್ಗೆ ಅಂಕಿಸಂಖ್ಯೆ ಸಹಿತ ದಾಖಲೆಗಳ ಮೂಲಕ ಸಾಕ್ಷ್ಯಗಳನ್ನು ನೀಡಿ ಪ್ಲಾಸ್ಟಿಕ್ ಬದುಕಿಗೆ ವಿಷವಾಗಲಿದೆ ಎಚ್ಚರಿಕೆ ಎಂದರು. ಮುಂದುವರೆದು ಮದುವೆ ಮಂಟಪಗಳಲ್ಲಿ ಆಹಾರ ಪೋಲು ಹೆಚ್ಚುತ್ತಿದ್ದು ಈ ಬಗ್ಗೆ ಜಾಗೃತಿ ಮೂಡಿಸಲು ಫಲಕಗಳನ್ನು ಅಂಟಿಸುವ ಕೆಲಸವಾಗಲಿ, ಈ ಜಾಗೃತಿ ಕಾರ್ಯಕ್ಕೆ ಹಸಿರು ಸಂಪದ ಬಳಗ ಮುಂದಾಗಲಿ ಎಂದರು.ಮುಖ್ಯ ಅತಿಥಿಯಾಗಿದ್ದ ಪುರಸಭೆ ಮಾಜಿ ಸದಸ್ಯ, ಹಸಿರು ಸಂಪದ ಬಳಗದ ಉಪಾಧ್ಯಕ್ಷ ಜೈಸಿಂಗ ಮೂಲಿಮನಿ., ಅವರು ಪಟ್ಟಣದಲ್ಲಿ ಎರಡು ವರ್ಷಗಳ ಹಿಂದೆ ಪ್ಲಾಸ್ಟಿಕ ಬಳಕೆ ನಿಷೇಧಕ್ಕೆ ನಡೆಸಿದ ಚಳುವಳಿ,
ಅದಕ್ಕೆ ಎದುರಾದ ವಿರೋಧಗಳು, ಒಂದು ದಿನ ಹೊಲಿಗೆಯರನ್ನು ಕೂಡಿಸಿ ಬಟ್ಟೆ ಚೀಲ ಹೊಲಿಸಿ ನೂರಾರು ಚೀಲ ವಿತರಿಸಿದ್ದು, ಮೆಲುಕು ಹಾಕಿದರು. ಸನ್ಮಾನಿತರಲ್ಲಿ ಒಬ್ಬರಾದ ಹಸಿರು ಸಂಪದ ಬಳಗದ ಸಂಚಾಲಕ ಎಸ್.ಎಸ್.ಗಡೇದ ಮಾತನಾಡಿ, ಪರಿಸರ ರಕ್ಷಣೆಯಲ್ಲಿ ಗಿಡ ಮರಗಳ ಪಾತ್ರ ದೊಡ್ಡದಿದೆ. ಅವುಗಳನ್ನು ಉಳಿಸಿ ಬೆಳೆಸಿ, ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸಲು ಆಯುಷ್ ಶಾಪಿಂಗ್ ಮಾಲ್ ನವರು ಹಾಕಿಕೊಂಡಿರುವ ಪ್ಲಾಸ್ಟಿಕ್ ಚೀಲ ತಿರಸ್ಕರಿಸಿ,
ಬಟ್ಟೆ ಚೀಲ ಬಳಸುವವರನ್ನು ಗುರುತಿಸಿ ಪರಿಸರ ಸ್ನೇಹಿ ಗ್ರಾಹಕರೆಂದು ಗೌರವಿಸುವಂತಹದ್ದು ವಿನೂತನವಾದುದು, ಇದು ಇತರರಿಗೆ ಮಾದರಿಯಾಗಿದೆ, ಪ್ಲಾಸ್ಟಿಕ್ ಇಲ್ಲದ ಜೀವನ ಊಹೆ ಕಷ್ಟ ಆದರೆ ಬಳಕೆಯ ಅನಿವಾರ್ಯತೆಯಲ್ಲಿ ಅದನ್ನು ಸುಡದೆ, ಎಲ್ಲೆಂದರಲ್ಲಿ ಬೀಸಾಡದೇ, ಪುರಸಭೆಯ ಕಸದ ವಾಹನದವರಿಗೆ ಕಸದಿಂದ ಪ್ರತ್ಯೇಕಿಸಿ ನೀಡಿ, ಮನೆಯ ಕಸ, ಚರಂಡಿಗೆ, ಖಾಲಿ ನಿವೇಶನಕ್ಕೆ ಚೆಲ್ಲಬೇಡಿ, ಎಂದು ಮನವಿ ಮಾಡಿದರು.