ತಾಳಿಕೋಟಿ

ಅಮೂಲ್ಯ ಕೃತಿಗಳು ಸಮಾಜದ ಆಸ್ತಿ- ಬೋರಗಿ ಶ್ರೀಗಳು

ಅಮೂಲ್ಯ ಕೃತಿಗಳು ಸಮಾಜದ ಆಸ್ತಿ- ಬೋರಗಿ ಶ್ರೀಗಳು


         ತಾಳಿಕೋಟಿ 07: ಮನುಷ್ಯ ಜನ್ಮಕ್ಕೆ ಬಂದ ಮೇಲೆ ಹಣ, ಆಸ್ತಿ, ಕೀರ್ತಿ, ಜನ ಸಂಪಾದನೆ ಮಾಡುತ್ತಾರೆ. ಇವೆಲ್ಲವೂಗಳಿಗಿಂತ ಭಜನಿ ಸಂಪಾದನೆ ಶ್ರೇಷ್ಠವಾದದ್ದು ಪ್ರತಿ ಗ್ರಾಮದಲ್ಲೂ ಈ ಪರಂಪರೆ ಇದ್ದರೆ ಆ ಊರು ಸಂಪದ್ಭರಿತವಾಗಿರುತ್ತದೆ ಎಂದು ಬೋರಗಿ ಪುರದಾಳದ ಸದ್ಗುರು ವಿಶ್ವಾರಾಧ್ಯಮಠದ ಪೀಠಾಧಿಪತಿಗಳಾದ ತಪೋರತ್ನಂ ಮಹಾಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.

       ಶುಕ್ರವಾರ ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ಕನ್ನಡ ಸಂಘ ಹಾಗೂ ಶರಣ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಅಪ್ಪನ ಸ್ಮರಣೆಯಲ್ಲಿ, ಡಾ.ಎಚ್‌.ಬಿ.ನಡವಿನಕೇರಿಯವರ ಏನು ಹೇಳಲಿ ಚಿತ್ರಸಿಂಗಿ ಹಾಗೂ ಭಜನ ಸಂಪದ ಎಂಬ ಕೃತಿಗಳ ಲೋಕಾರೆ​‍್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

           ಭಜನಿ ಎಂದರೆ ಭವದ, ಜನನ ಮರಣಗಳ ದಾಟಿ ಅಂತರಾತ್ಮದ ಅರಿವಿನ ದಾರಿಯಾಗಿದೆ. ಭಜನಿ ಮಾಡುವವರು ಆನಂದ ಹಾಗೂ ಸಂತೃಪ್ತಿಯ ಬದುಕು ನಿರ್ವಹಿಸುತ್ತಾರೆ. ಭಜನಿ ಸಂಪ್ರದಾಯ ಕಡಕೋಳ, ಶಿಶುನಾಳದಂತೆ ತಿಳಗೂಳ ಬೋರಗಿ ಪುರದಾಳಗಳಲ್ಲಿ ಭೀಮಾಶಂಕರ ತತ್ವಪದ ಪರಂಪರೆ ಇಂದು ಜನಮಾನಸಕ್ಕೆ ತಲುಪುತ್ತಿದೆ.

         ತತ್ವಪದ ಮಾರ್ಗದಲ್ಲಿ ನಡೆಯುವ ಸಾಮಾನ್ಯ ಜನರು ಆಧ್ಯಾತ್ಮದ ಉತ್ತುಂಗವನ್ನು ತಲುಪಬಲ್ಲರು, ಅನುಭಾವ ಸಾಹಿತ್ಯ ಆತ್ಮದುದ್ಧಾರ ಮಾಡಬಲ್ಲದು, ಈ ನಿಟ್ಟಿನಲ್ಲಿ ಸದ್ಗುರು ಭೀಮಾಶಂಕರರು ಹಾಗೂ ಅವರ ಪರಮಶಿಷ್ಯರಾದ ತಿಳಗೂಳದ ಯಮನೂರೇಶ ಗುರುಗಳು, ಹಂದಿಗನೂರು ಖಾದಿರಸಾಹೇಬರು ಪ್ರಮುಖರಾಗುತ್ತಾರೆ. 


ಸುದ್ದಿ ಓದಿ