ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ: ನದಿಪಾತ್ರದ ಜನರು ಎಚ್ಚರಿಕೆಯಿಂದಿರಲು ಸೂಚನೆ
ಇಂಡಿ 21: ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಹಾಗೂ ವೀರ್ ಜಲಾಶಯದಿಂದ 1.60 ಲಕ್ಷ ಕ್ಯೂಸೆಕ್ಸ ನೀರು ಹರಿಬಿಟ್ಟ ಪರಿಣಾಮ ನದಿ ಪಾತ್ರದ ಗ್ರಾಮಗಳಲ್ಲಿ ಆತಂಕ ಶುರುವಾಗಿದೆ.
ಈಗಾಗಲೇ ಮಿರಗಿ ಮತ್ತು ರೋಡಗಿ ಗ್ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿದ್ದು ಅಪಾರ ಪ್ರಮಾಣದ ರೈತರ ಕಬ್ಬು ಸೇರಿದಂತೆ ಇನ್ನಿತರ ಬೆಳೆಗಳು ನೀರು ಪಾಲಾಗಿವೆ.
ಭೀಮಾನದಿಗೆ ಮಹಾರಾಷ್ಟ್ರದಿಂದ ಪ್ರತೀ ದಿನವೂ ನೀರು ಹರಿಬಿಡಲಾಗುತ್ತಿದ್ದು ಭೀಮಾನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗುತ್ತಿದೆ. ನದಿಪಾತ್ರದ ಜನರು ಆದಷ್ಟು ಎಚ್ಚರಿಕೆಯಿಂದ ಇರಲು ಆಯಾ ಗ್ರಾ.ಪಂ ಮತ್ತು ಗ್ರಾಮಲೆಕ್ಕಾಧಿಕಾರಿಗಳ ಮೂಲಕ ಡಂಗೂರ ಸಾರಿಸಿ ಗ್ರಾಮಸ್ಥರಿಗೆ ತಿಳುವಳಿಕೆ ನೀಡಲಾಗಿದೆ. ನೀರು ನಿಂತು ಬೆಳೆ ಹಾನಿಯಾದ ರೈತರ ಜಮೀನುಗಳಿಗೆ ಕೃಷಿ, ತೋಟಗಾರಿಕೆ ಇಲಾಖೆಗಳ ರೈತರು ಸರ್ವೇ ನಡೆಸಿ ಮಾಹಿತಿ ನೀಡಲು ತಿಳಿಸಲಾಗಿದೆ.
ನಾಗಯ್ಯ ಹಿರೇಮಠ. ತಹಸೀಲ್ದಾರ ಇಂಡಿ.