ಜಮಖಂಡಿ

ಕಬ್ಬು ಸಾಗಾಣಿಕೆಗೆ ತಕ್ಷಣ ಪರವಾನಗಿ ನೀಡಿ: ರೈತರ ಆಗ್ರಹ

ಕಬ್ಬು ಸಾಗಾಣಿಕೆಗೆ ತಕ್ಷಣ ಪರವಾನಗಿ ನೀಡಿ: ರೈತರ ಆಗ್ರಹ


ಲೋಕದರ್ಶನ ವರದಿ 

                ಜಮಖಂಡಿ 09 : ಬೆಳಗಾವಿಯಲ್ಲಿ ನಡೆದ ರೈತರ ಹೋರಾಟಕ್ಕೆ ಜಯ ಸಿಕ್ಕಿದ್ದು, ಸರ್ಕಾರ ಕಬ್ಬಿಗೆ ಪ್ರತಿ ಟನ್‌ಗೆ ಮೊದಲ ಕಂತು ರೂ3.500 ಹಾಗೂ ಎರಡನೇ ಕಂತು ರೂ.100 ನೀಡುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ, ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಾಣಿಕೆಗೆ ತಕ್ಷಣ ಪರವಾನಗಿ ನೀಡಬೇಕು ಹಾಗೂ ರೈತರಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ ಹಾಗೂ ಜಿಲ್ಲಾ ಹೆಚ್ಚುವರಿ ಎಸ್‌ಪಿ ಅವರಿಗೆ ಪ್ರತ್ಯಕವಾಗಿ ರೈತರು ಮನವಿ ಸಲ್ಲಿಸಿದರು. 

            ನಗರದ ಪಂಚಮಸಾಲಿ ಸಮುದಾಯ ಭವನದಲ್ಲಿ ನಡೆದ ರೈತರ ಸಭೆಯಲ್ಲಿ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿದ ರೈತರು, ಕಬ್ಬು ಕಟಾವಿಗೆ ಬಂದಿದ್ದು, ಸಕ್ಕರೆ ಕಾರ್ಖಾನೆಗಳಿಗೆ ಸಾಗಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

             ಈಗಾಗಲೇ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕಬ್ಬನ್ನು ಕಾರ್ಖಾನೆಗಳಿಗೆ ಸಾಗಣೆ ಮಾಡಲು ವಿಳಂಬವಾದರೆ ಬೆಳೆ ನಾಶವಾಗುವ ಆತಂಕ ಎದುರಾಗಿದೆ ಎಂದು ರೈತರು ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು. 

            ಕೂಡಲೇ ಕಬ್ಬು ಸಾಗಾಣಿಕೆಗೆ ಅನುಮತಿ ನೀಡುವಂತೆ ಆಗ್ರಹಿಸಿ ತಹಶೀಲ್ದಾರ ಅನೀಲ ಬಡಿಗೇರ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು. ನಂತರ ನೂರಾರು ರೈತರು ಡಿಎಸ್‌ಪಿ ಕಚೇರಿಗೆ ತೆರಳಿ ಬಾಗಲಕೋಟೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಡಿಎಸ್‌ಪಿ ಅವರಿಗೆ ಮನವಿ ಸಲ್ಲಿಸಿದರು.

           ಕಬ್ಬು ಕಾರ್ಖಾನೆಗಳಿಗೆ ಸಾಗಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಗಲಾಟೆ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ, ಸೂಕ್ತ ಪೊಲೀಸ್ ಬಂದೋಬಸ್ತ್‌ ಒದಗಿಸಬೇಕು ಎಂದು ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ಜಮಖಂಡಿ ತಾಲ್ಲೂಕಿನ ವಿವಿಧ ಗ್ರಾಮಗಳ ನೂರಾರು ರೈತರು ಉಪಸ್ಥಿತರಿದ್ದರು. 


ಸುದ್ದಿ ಓದಿ