ಜಮಖಂಡಿ

ಕಬ್ಬಿಗೆ ಸೂಕ್ತ ಬೆಲೆ ನೀಡದ ಸಕ್ಕರೆ ಕಾರ್ಖಾನೆ ವಿರುದ್ಧ ರೈತರ ಆಕ್ರೋಶ

ಕಬ್ಬಿಗೆ ಸೂಕ್ತ ಬೆಲೆ ನೀಡದ ಸಕ್ಕರೆ ಕಾರ್ಖಾನೆ ವಿರುದ್ಧ ರೈತರ ಆಕ್ರೋಶ

ಲೋಕದರ್ಶನ ವರದಿ 

       ಜಮಖಂಡಿ 07 : ತಾಲೂಕಿನ ಕಂಕನವಾಡಿ ಗ್ರಾಮದಲ್ಲಿ ರಾತ್ರಿ ಸಮಯದಲ್ಲಿ ಕಂಕನವಾಡಿ ಕ್ರಾಸ್‌ನಲ್ಲಿ ಕಬ್ಬು ಬೆಳೆಗಾರರು ರೈತರು ಕಬ್ಬಿಗೆ ಪ್ರತಿ ಟನ್‌ಗೆ ರೂ 5,500 ಬೆಲೆ ನೀಡಬೇಕೆಂದು ಆಗ್ರಹಿಸಿ ಹೋರಾಟ ನಡೆಸಿದ್ದರು. ರೈತರಿಗೆ ನೀಡಿದ ಭರವಸೆಯನ್ನು ಸಕ್ಕರೆ ಕಾರ್ಖಾನೆ ಮಾಲೀಕರು ಉಲ್ಲಂಘಿಸಿದ್ದಾರೆಂದು ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳನ್ನು ತಡೆದು ರೈತರು ಪ್ರತಿಭಟನೆ ನಡೆಸಿದ್ದು, ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

         ತಾಲೂಕಾಡಳಿತ ಸೌಧದ ಎದುರು ಸತತ 11 ದಿನಗಳ ಕಾಲ ನಡೆದ ಹೋರಾಟದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ರೈತರು ಒಗ್ಗಟ್ಟಿನಿಂದ ಹೋರಾಡಿದ್ದರು. ಪ್ರತಿ ಟನ್ ಕಬ್ಬಿಗೆ ರೂ, 5,500 ಬೆಲೆ ನೀಡಬೇಕೆಂಬುದು ರೈತರ ಪ್ರಮುಖ ಬೇಡಿಕೆಯಾಗಿತ್ತು. ಈ ಹೋರಾಟದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪ್ರತಿ ಟನ್‌ಗೆ ರೂ 3,600 ಮೊದಲ ಕಂತಿನ ಹಣ ನೀಡುವುದಾಗಿ ಕಾರ್ಖಾನೆ ಮಾಲೀಕರು ಒಪ್ಪಿಕೊಂಡಿದ್ದರು.

        ಆದರೆ ಇದೀಗ ರೂ 3,500 ಮುಂಗಡವಾಗಿ ನೀಡಿ, ಉಳಿದ ರೂ,100 ಕಾರ್ಖಾನೆ ಆರಂಭವಾದ ನಂತರ ನೀಡುವುದಾಗಿ ಕಾರ್ಖಾನೆ ಮಾಲೀಕರು ಹೇಳಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ರೈತರು ಕಂಕನವಾಡಿ ಕ್ರಾಸ್‌ನಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.ಇದೇ ಸಂದರ್ಭದಲ್ಲಿ ಅನೇಕ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 


ಸುದ್ದಿ ಓದಿ