ಜಮಖಂಡಿ ನಗರಸಭೆಯಲ್ಲಿ ಪೌರಾಯುಕ್ತರ ಬೀಳ್ಕೊಡುಗೆ-ಸ್ವಾಗತ ಸಮಾರಂಭ
ಲೋಕದರ್ಶನ ವರದಿ
ಜಮಖಂಡಿ 06 : ತಾಲೂಕಿನಲ್ಲಿ ಅಧಿಕಾರಿಗಳು ಬರುತ್ತಾರೆ ಮತ್ತೆ ವರ್ಗಾವಣೆಗೊಂಡು ಹೋಗುತ್ತಾರೆ. ಅವರು ತಮ್ಮ ಅವಧಿಯಲ್ಲಿ ಮಾಡಿರುವ ಜನಪರ ಕೆಲಸಗಳು ಮಾತ್ರ ಶಾಶ್ವತವಾಗಿ ಇರುವ ಹಾಗೆ ಮಾಡಿದರೆ ಮಾತ್ರ ಸಾರ್ವಜನಿಕರ ಮನಸಿನಲ್ಲಿ ಉಳಿಯಲು ಸಾಧ್ಯ ಎಂದು ಓಲೇಮಠದ ಆನಂದ ದೇವರು ಹೇಳಿದರು.
ನಗರದ ಪಿ.ಬಿ. ಹೈಸ್ಕೂಲ್ನ ಗುರುದೇವ ರಾನಡೆ ಭವನದಲ್ಲಿ ನಡೆದ ನಗರಸಭೆ ಕಾರ್ಯಾಲಯದ ವತಿಯಿಂದ ವರ್ಗಾವಣೆಗೊಂಡ ಪೌರಾಯುಕ್ತ ಜ್ಯೋತಿ ಗೀರೀಶ ಎಸ್. ಅವರಿಗೆ ಬೀಳ್ಕೊಡುಗೆ ಹಾಗೂ ನೂತನವಾಗಿ ಆಗಮಿಸಿದ ಪೌರಾಯುಕ್ತ ಜಗದೀಶ ಎಸ್. ಈಟಿ ಅವರಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಮಖಂಡಿ ನಗರದಲ್ಲಿನ ಗಲೀಜು ಪ್ರದೇಶಗಳನ್ನು ಸ್ವಚ್ಛಗೊಳಿಸುವ ಗುರಿಯನ್ನು ಹೊಂದಿದ್ದ ಜ್ಯೋತಿ ಗೀರೀಶ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ದೇಸಾಯಿ ವೃತ್ತದಲ್ಲಿರುವ ಪರಶುರಾಮ ಉದ್ಯಾನವನದ ಮುಂಭಾಗದಲ್ಲಿ ಬಿಂದಿಗೆ ಹಿಡಿದ ಕಾವೇರಿ ಸುಂದರ ಮೂರ್ತಿಯನ್ನು ಸ್ಥಾಪಿಸಿ, ಅದರ ಬಳಿ ನಮ್ಮ ಜಮಖಂಡಿ ಎಂಬ ಹೆಸರನ್ನು ಅಳವಡಿಸಿರುವುದು ಆಕರ್ಷಣೆಯ ಕೇಂದ್ರವಾಗಿದೆ.
ಇದನ್ನು ವೀಕ್ಷಿಸಲು ಬೇರೆ ತಾಲೂಕುಗಳಿಂದಲೂ ಜನರು ಆಗಮಿಸಿ ಸೆಲ್ಫಿ ತೆಗೆದುಕೊಂಡು ಹೋಗುತ್ತಿದ್ದಾರೆ. ಹೀಗೆ ಸಾರ್ವಜನಿಕರ ಪರವಾಗಿ ಹಾಗೂ ಅಭಿವೃದ್ಧಿಪರವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅವರಂತೆ ನೂತನವಾಗಿ ಆಗಮಿಸಿರುವ ಅಧಿಕಾರಿಯೂ ಜನಪರ ಕೆಲಸಗಳನ್ನು ಮಾಡುತ್ತಾರೆ ಎಂಬ ವಿಶ್ವಾಸ ಜಮಖಂಡಿ ಜನತೆಯಲ್ಲಿದೆ ಎಂದು ಶುಭ ಹಾರೈಸಿದರು.