ನರೇಗಾ ಕಾರ್ಮಿಕರ ಆರೋಗ್ಯ ಸದೃಢಕ್ಕೆ ಗ್ರಾಮ ಆರೋಗ್ಯ ಅಭಿಯಾನ
ಇಂಡಿ 31: ಕೂಲಿಕಾರರ ಆರೋಗ್ಯ ಸುಧಾರಣೆ ಜೊತೆಗೆ ಗ್ರಾಮದ ಆರೋಗ್ಯ ಸದೃಢಗೊಳ್ಳಬೇಕು ಎಂಬ ಉದ್ದೇಶದೊಂದಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಈ ಅಭಿಯಾನವನ್ನು ಆರಂಭಿಸಿದೆ. ಎಲ್ಲರಿಗೂ ಉತ್ತಮ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ಸ್ಥಳದಲ್ಲಿಯೇ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಪಿಡಿಓ ವಿಜಯಾ ತಳವಾರ ಹೇಳಿದರು .
ಮಂಗಳವಾರ ತಾಲೂಕಿನ ಬಬಲಾದ, ಸಾಲೋಟಗಿ ಮತ್ತು ಬಳ್ಳೊಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ಅಮೃತ ಅಭಿಯಾನ ಉಚಿತ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು.
ಬಿಪಿ. ಶುಗರ್, ಮಧುಮೇಹ, ಅತಿ ರಕ್ತದೊತ್ತಡದಂತಹ ಪ್ರಾಥಮಿಕ ಅಸಾಂಕ್ರಮಿಕ ಗುಣಲಕ್ಷಣಗಳನ್ನು ಪತ್ತೆ ಹಚ್ಚಿ ಸೂಕ್ತ ಸಮಾಲೋಚನೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಆರೋಗ್ಯ ಸಿಬ್ಬಂದಿಗಳು ಕಾಮಗಾರಿ ಸ್ಥಳದಲ್ಲಿ ಸಾಲೋಟಗಿ (28), ಬಳ್ಳೊಳ್ಳಿ (48) ಮತ್ತು ಬಬಲಾದ (31) ಕೂಲಿಕಾರರಿಗೆ ಬಿಪಿ. ಶುಗರ್, ಅಧಿಕ ರಕ್ತದೊತ್ತಡ, ಮಧುಮೇಹದಂತಹ ಅಸಾಂಕ್ರಮಿಕ ಗುಣಲಕ್ಷಣಗಳನ್ನು ಪರಿಕ್ಷೀಸಿ ಮಾತ್ರೆ ವಿತರಿಸಿ ಸಮಾಲೋಚನೆ ಮಾಡಿದರು.
ಈ ಸಂದರ್ಭದಲ್ಲಿ ತಾಂತ್ರಿಕ ಸಹಾಯಕ ಶಿವರಾಜ ಬಿರಾದಾರ, ಗ್ರಾಮ ಪಂಚಾಯಿತಿ ಸಿಬ್ಬಂದಿ ಭೀಮಾಶಂಕರ ನಾವಿ, ಆನಂದ ಚೌಹಾಣ್, ಪೂಜಾ ನಾಯ್ಕೊಡಿ, ಮಂಜುನಾಥ ಅನಚಿ, ರಾಜು ಬಡಿಗೇರ, ಲಕ್ಷ್ಮಣ, ಮಂಜುಳಾ, ಕೆಎಚ್‌ಪಿಟಿ ಸಿಬ್ಬಂದಿ ಶಿವಾನಂದ ಸಿಂಗೆ, ಉಮಾ ಮಹೇಶ್ ತಂಗಿ, ಆಶಾ ಕಾರ್ಯಕರ್ತೆಯರು ಇದ್ದರು.