ಕುಂದ್ರಳ್ಳಿಯಲ್ಲಿ ಸಂಭ್ರಮದಿಂದ ಗೌರಿ ಹುಣ್ಣಿಮೆ ಆಚರಣೆ: ಸಕ್ಕರೆ ಗೊಂಬೆಗಳ ಆರತಿ ವಿಶೇಷ ಆಕರ್ಷಣೆ
ಲಕ್ಷ್ಮೇಶ್ವರ 21: ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷವಾದ ಸ್ಥಾನವಿದೆ. ಅವುಗಳಲ್ಲಿ ಹೆಣ್ಣುಮಕ್ಕಳು ಅತ್ಯಂತ ಸಂಭ್ರಮ ಮತ್ತು ಭಕ್ತಿಯಿಂದ ಆಚರಿಸುವ ಹಬ್ಬವೇ ’ಗೌರಿ ಹುಣ್ಣಿಮೆ’.ಈ ಹಬ್ಬವನ್ನು ವಿಶೇಷವಾಗಿ ಉತ್ತರ ಕರ್ನಾಟಕದ ಭಾಗಗಳಲ್ಲಿ ಕಾರ್ತಿಕ ಮಾಸದ ಹುಣ್ಣಿಮೆಯಂದು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಇದು ಕೇವಲ ಧಾರ್ಮಿಕ ಆಚರಣೆಯಲ್ಲದೆ, ಜನಪದ ಸೊಗಡು ಮತ್ತು ಕೌಟುಂಬಿಕ ಬಾಂಧವ್ಯವನ್ನು ಬೆಸೆಯುವ ಸುಂದರ ಹಬ್ಬವಾಗಿದೆ.ಗೌರಿ ಹುಣ್ಣಿಮೆಯು ಆದಿಶಕ್ತಿ ಪಾರ್ವತಿ ದೇವಿಗೆ (ಗೌರಮ್ಮನಿಗೆ) ಸಮರ್ಿತವಾದ ಹಬ್ಬವಾಗಿದೆ. ಉತ್ತಮ ಪತಿ ಸಿಗಲೆಂದು ಕನ್ಯೆಯರು, ಹಾಗೂ ತಮ್ಮ ಪತಿಯ ದೀರ್ಘಾಯುಷ್ಯ, ಕುಟುಂಬದ ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ ಸುಮಂಗಲಿಯರು ಗೌರಮ್ಮನನ್ನು ಪೂಜಿಸುತ್ತಾರೆ.
ತವರು ಮನೆಯವರು ಮದುವೆಯಾದ ಹೆಣ್ಣುಮಕ್ಕಳಿಗೆ ಈ ಹಬ್ಬಕ್ಕೆ ವಿಶೇಷ ಉಡುಗೊರೆ ಹಾಗೂ ಸಕ್ಕರೆ ಆರತಿಗಳನ್ನು ಕಳುಹಿಸಿಕೊಡುವ ಸಂಪ್ರದಾಯವಿದೆ.ಗೌರಮ್ಮನ ಪ್ರತಿಷ್ಠಾಪನೆ: ಹಬ್ಬಕ್ಕೂ ಕೆಲವು ದಿನಗಳ ಮೊದಲೇ ಮಣ್ಣು ಅಥವಾ ಕಟ್ಟಿಗೆಯಿಂದ ಮಾಡಿದ ಶಿವ-ಪಾರ್ವತಿಯರ (ಗೌರಮ್ಮ) ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ.
ಸಕ್ಕರೆ ಆರತಿ ಮತ್ತು ಅಲಂಕಾರ: ಈ ಹಬ್ಬದ ಪ್ರಮುಖ ಆಕರ್ಷಣೆಯೇ ’ಸಕ್ಕರೆ ಗೊಂಬೆಗಳ ಆರತಿ’. ಸಕ್ಕರೆಯಿಂದ ತಯಾರಿಸಿದ ರಥ, ಆನೆ, ಒಂಟೆ, ಶಿವ-ಪಾರ್ವತಿ, ಬಸವಣ್ಣ ಮುಂತಾದ ವಿವಿಧ ಆಕೃತಿಯ ಗೊಂಬೆಗಳನ್ನು ತಟ್ಟೆಯಲ್ಲಿ ಜೋಡಿಸಿ, ಅವರೆ ಹೂವು ಮತ್ತು ಚೆಂಡು ಹೂವುಗಳಿಂದ ಅಲಂಕರಿಸಿ ಗೌರಮ್ಮನಿಗೆ ಆರತಿ ಬೆಳಗುತ್ತಾರೆ.
ಜನಪದ ಸೊಗಡು: ಹುಣ್ಣಿಮೆಯ ರಾತ್ರಿ ಹೆಣ್ಣುಮಕ್ಕಳು ಹೊಸ ಬಟ್ಟೆಗಳನ್ನು ತೊಟ್ಟು, ಜನಪದ ಹಾಡುಗಳನ್ನು ಹಾಡುತ್ತಾ, ಕೋಲಾಟ ಆಡುತ್ತಾ ಸಂಭ್ರಮಿಸುತ್ತಾರೆ. ಹೂರಣದ ಆರತಿ ಮತ್ತು ದೀಪಗಳನ್ನು ಬೆಳಗಿಸಿ ಪರಸ್ಪರ ಸಕ್ಕರೆ ಗೊಂಬೆಗಳನ್ನು ಹಂಚಿಕೊಳ್ಳುತ್ತಾರೆ. ಹಬ್ಬದ ಕೊನೆಯ ದಿನದಂದು ಗೌರಮ್ಮನ ಮೂರ್ತಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿ, ಮೆರವಣಿಗೆಯ ಮೂಲಕ ಕೆರೆ ಅಥವಾ ನದಿಯಲ್ಲಿ ವಿಸರ್ಜಿಸಲಾಗುತ್ತದೆ. ಅದರಂತೆ ಲಕ್ಷ್ಮೇಶ್ವರ ತಾಲೂಕಿನ ಕುಂದ್ರಳ್ಳಿ ಗ್ರಾಮದಲ್ಲಿ ಮುದ್ದು ಮಕ್ಕಳು ಸಕ್ಕರೆ ಆರತಿ ಬೆಳಗುವದರೊಂದಿಗೆ ಗೌರಿ ಹುಣ್ಣಿಮೆ ಹಬ್ಬದ ಸಂಭ್ರಮದಲ್ಲಿ ಕಂಡು ಬಂದರು.