ನಕಲಿ ಎಸ್ಟಿ ಪ್ರಮಾಣ ಪತ್ರ ಜಾಲ: ತಪ್ಪಿತಸ್ಥ ಅಧಿಕಾರಿಗಳು, ಫಲಾನುಭವಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಶ್ರೀಕಾಂತ ಪೂಜಾರ ಆಗ್ರಹ
ಗದಗ 21: ನಕಲಿ ದಾಖಲೆಗಳನ್ನು ಸೃಷ್ಟಿಸಿ ಪರಿಶಿಷ್ಟ ಪಂಗಡದ (ವಾಲ್ಮೀಕಿ/ನಾಯಕ) ಜಾತಿ ಪ್ರಮಾಣ ಪತ್ರ ಪಡೆದಿರುವವರ ಹಾಗೂ ಅದಕ್ಕೆ ಸಹಕರಿಸಿದ ಭ್ರಷ್ಟ ಅಧಿಕಾರಿಗಳ ವಿರುದ್ಧ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ರಾಜ್ಯ ಎಸ್ಸಿ, ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರ ತಡೆ ಸಮಿತಿಯ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ ಸಿ. ಪೂಜಾರ ಆಗ್ರಹಿಸಿದ್ದಾರೆ.
ಈ ಕುರಿತು ಗದಗ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಉಪಾಧೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಗದಗ ನಗರ ವ್ಯಾಪ್ತಿಯ ನೇತ್ರಾವತಿ ಹಡಪದ ಎಂಬುವವರು ಪರಿಶಿಷ್ಟ ಪಂಗಡದ (ವಾಲ್ಮೀಕಿ/ನಾಯಕ) ಜಾತಿ ಪ್ರಮಾಣ ಪತ್ರ ಪಡೆದುಕೊಂಡಿರುವ ಕುರಿತು ದೃಢೀಕರಣಕ್ಕಾಗಿ ಸಮಿತಿಯ ವತಿಯಿಂದ ಮಾಹಿತಿ ಹಕ್ಕು ಅಧಿನಿಯಮದಡಿ (ಆರ್. ಟಿ. ಆಯ್) ಅರ್ಜಿ ಸಲ್ಲಿಸಲಾಗಿತ್ತು.
ಈ ಅರ್ಜಿ ಸಲ್ಲಿಕೆಯಾದ ತಕ್ಷಣವೇ ಎಚ್ಚೆತ್ತುಕೊಂಡ ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳು, ತಾವು ಅನರ್ಹರಿಗೆ ನಕಲಿ ಜಾತಿ ಪ್ರಮಾಣ ಪತ್ರ ವಿತರಿಸಿರುವುದು ಬಯಲಾಗುವ ಭೀತಿಯಿಂದ ಇದೀಗ ಆ ಪ್ರಮಾಣ ಪತ್ರವನ್ನು ರದ್ದುಪಡಿಸಲು ಮುಂದಾಗಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಕೇವಲ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಿ ಕೈತೊಳೆದುಕೊಂಡರೆ ಈ ಅಕ್ರಮ ಮುಗಿಯುವುದಿಲ್ಲ. ಇಂತಹ ನಕಲಿ ಪ್ರಮಾಣ ಪತ್ರಗಳಿಂದಾಗಿ ನಿಜವಾದ ಪರಿಶಿಷ್ಟ ಪಂಗಡದ ಬಡ ಜನರು ಸರ್ಕಾರದ ಮೀಸಲಾತಿ ಹಾಗೂ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದು ಸಂವಿಧಾನಬದ್ಧ ಹಕ್ಕುಗಳ ಕಗ್ಗೊಲೆಯಾಗಿದೆ.
ಆದ್ದರಿಂದ ಪ್ರಮಾಣ ಪತ್ರ ರದ್ದತಿಯ ಜೊತೆಗೆ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಗೋವಿಂದರಾಜ್ ಪನ್ನೂರು, ಸಮಿತಿ ಅಧ್ಯಕ್ಷರಾದ ಶ್ರೀಕಾಂತ ಪೂಜಾರ. ಪ್ರಮುಖರಾದ ನಾಗರಾಜ ಯರಗುಡಿ, ಮಂಜುನಾಥ ವಾಲ್ಮೀಕಿ, ಮುತ್ತು ಯರಗುಡಿ ಅವರು ಒತ್ತಾಯಿಸಿದ್ದಾರೆ.