ವಿಜಯಪುರ

ಬಿ.ಎಲ್‌.ಡಿ.ಇ ಆಸ್ಪತ್ರೆಯಿಂದ ಉಚಿತ ಮಧುಮೇಹ ತಪಾಸಣೆ ಶಿಬಿರ

ಬಿ.ಎಲ್‌.ಡಿ.ಇ ಆಸ್ಪತ್ರೆಯಿಂದ ಉಚಿತ ಮಧುಮೇಹ ತಪಾಸಣೆ ಶಿಬಿರ


           ವಿಜಯಪುರ 17 :  ಜೀವನ ಶೈಲಿ ಬದಲಾವಣೆಯಿಂದ ಭಾರತವು ವಿಶ್ವದ ಮಧುಮೇಹ ರಾಜಧಾನಿಯಾಗುತ್ತಿದೆ ಎಂದು ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ. ತೇಜಶ್ವಿನಿ ವಲ್ಲಭ ಕಳವಳ ವ್ಯಕ್ತಪಡಿಸಿದ್ದಾರೆ.   ಶನಿವಾರ ನಗರದ ಬಿ.ಎಲ್‌.ಡಿ.ಇ ಡೀಮ್ಡ್‌ ವಿವಿಯ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಆಯೋಜಿಸಿದ ಮಧುಮೇಹ ತಪಾಸಣೆ ಮತ್ತು ಚಿಕಿತ್ಸೆ ಎರಡು ದಿನಗಳ ಉಚಿತ ಶಿಬಿರ ಮತ್ತು ಮಧುಮೇಹ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.   

             ಇಂದು ನಮ್ಮ ದೇಶದಲ್ಲಿ ಜೀವನಶೈಲಿಯ ಬದಲಾವಣೆಯಿಂದ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ.  ಈ ರೋಗಕ್ಕೆ ಚಿಕಿತ್ಸೆಗಿಂತ ಕಾಯಿಲೆಯನ್ನು ತಡೆಗಟ್ಟುವುದು ಮುಖ್ಯವಾಗಿದೆ.  ರೋಗದ ಆರಂಭಿಕ ಪತ್ತೆ, ಸಕಾಲಿಕ ಚಿಕಿತ್ಸೆ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು.  ವೈದ್ಯರು ಆರಂಭಿಕ ತಪಾಸಣೆಗೆ ಮತ್ತು ಜೀವನಶೈಲಿ ಬದಲಾವಣೆ ಸಲಹೆಗಳಿಗೆ ಒತ್ತು ನೀಡಬೇಕು ಎಂದು ಕರೆ ಅವರು ಕರೆ ನೀಡಿದರು.    ಸಾಮಾನ್ಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ವಿಜಯಕುಮಾರ ವಾರದ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಗಮನ ಹರಿಸಬೇಕಾಗಿದೆ.  ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಬೇಕು. 

           ಪ್ರತಿಯೊಬ್ಬರು ಮುನ್ನೆಚ್ಚರಿಕೆ ವಹಿಸುವುದರಿಂದ ಅದನ್ನು ತಡೆಗಟ್ಟಲು ಮತ್ತು ಆರಂಭದಲ್ಲಿಯೇ ಪತ್ತೆ ಮಾಡಲು ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ.  ಈ ನಿಟ್ಟಿನಲ್ಲಿ ಬಿ.ಎಲ್‌.ಡಿ.ಇ ಆಸ್ಪತ್ರೆ ಗ್ರಾಮೀಣ ಭಾಗದಲ್ಲಿಯೂ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸುವ ಮೂಲಕ ಜನರ ಆರೋಗ್ಯಕ್ಕೆ ಒತ್ತು ನೀಡುತ್ತಿದೆ ಎಂದು ಹೇಳಿದರು.   

 ಶರೀರಕ್ರಿಯಾ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಜ್ಯೋತಿ ಖೋದ್ನಾಪುರ ಅವರು ಮಧುಮೇಹ ನಿಯಂತ್ರಣ ಮತ್ತು ಚಯಾಪಚಯ ಆರೋಗ್ಯದಲ್ಲಿ ಯೋಗದ ಪಾತ್ರವನ್ನು ವಿವರಿಸಿದರು.                              ಸಹಪ್ರಾಧ್ಯಾಪಕಿ ಡಾ. ಅನುಜಾ ಎಂ. ಕೆ.: ಮಧುಮೇಹದ ಮೂಲಭೂತ ಅಂಶಗಳು, ಸಾಮಾನ್ಯ ರಕ್ತದ ಸಕ್ಕರೆ ಮಟ್ಟ ಮತ್ತು ಆರಂಭಿಕ ಪತ್ತೆಯ ಬಗ್ಗೆ ಮಾಹಿತಿ ನೀಡಿದರು. ಸಹಪ್ರಾಧ್ಯಾಪಕ ಡಾ. ಶ್ರೀಧರ ಪಾಟೀಲ ಅವರು ಮಧುಮೇಹದಿಂದ ಉಂಟಾಗುವ ದೀರ್ಘಕಾಲೀನ ಅಂಗಾಂಗ ಹಾನಿ ಮತ್ತು ತೊಡಕುಗಳ ಬಗ್ಗೆ ಮಾಹಿತಿ ನೀಡಿದರು.  ಸಹಾಯಕಪ್ರಾಧ್ಯಾಪಕ ಡಾ. ಶ್ರವಣಕುಮಾರ ಪೋತ್ಕಾರ, ಮಧುಮೇಹಿಗಳ ಆಹಾರ ಪದ್ಧತಿ ಮತ್ತು ಆರೋಗ್ಯಕರ ಜೀವನಶೈಲಿಯ ಮಾರ​‍್ಾಡುಗಳ ಕುರಿತು ಮಾತನಾಡಿದರು. 

                 ಈ ಸಂದರ್ಭದಲ್ಲಿ ಬಿ.ಎಲ್‌.ಡಿ.ಇ ಆಸ್ಪತ್ರೆಯ ತುರ್ತು ಚಿಕಿತ್ಸೆ ವಿಭಾಗದ ಮುಖ್ಯ ವೈದ್ಯಾಧಿಕಾರಿ ಡಾ. ಈರಣ್ಣ ಧಾರವಾಡಕರ ಉಪಸ್ಥಿತರಿದ್ದರು.  ರೋಗಿಗಳು, ಆಸ್ಪತ್ರೆ ಸಿಬ್ಬಂದಿ ಮತ್ತು ಬೋಧಕ ವರ್ಗದವರು ಸೇರಿದಂತೆ ಸುಮಾರು 70 ರಿಂದ 80 ಜನರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉಚಿತ ತಪಾಸಣೆಯ ಸದುಪಯೋಗ ಪಡೆದುಕೊಂಡರು. 


ಸುದ್ದಿ ಓದಿ