ಕಾನೂನುಬದ್ಧ ದತ್ತು ಮೂಲಕ ಮಕ್ಕಳಿಗೆ ಸುರಕ್ಷಿತ ಭವಿಷ್ಯ ಕಲ್ಪಿಸಿ
ಲೋಕದರ್ಶನ ವರದಿ
ಧಾರವಾಡ 12: ಮಕ್ಕಳನ್ನು ದತ್ತು ಪಡೆಯಲು ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿದ್ದು, ಯಾರೂ ಕೂಡ ಅಡ್ಡದಾರಿ ಅಥವಾ ಶಾರ್ಟ್‌ಕಟ್ ಅನುಸರಿಸದೇ, ಕಾನೂನು ಪ್ರಕ್ರಿಯೆಯ ಮೂಲಕವೇ ಮಕ್ಕಳನ್ನು ದತ್ತು ಪಡೆಯಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್. ಆರ್. ಅವರು ಹೇಳಿದರು.
ಅವರು ಇಂದು (ನ.12) ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಪಾಲನಾ ಸಂಸ್ಥೆಗಳು ಇವರ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ದತ್ತು ಮಾಸಾಚರಣೆ- ನವೆಂಬರ್ 2026 ವಾಕಥಾನ್ ರಾ್ಯಲಿಗೆ ಚಾಲನೆ ನೀಡಿ, ಮಾತನಾಡಿದರು.
ಜಿಲ್ಲೆಯಲ್ಲಿ ಮಕ್ಕಳಿಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ನಡೆಯುತ್ತಿವೆ. ಮಕ್ಕಳನ್ನು ದತ್ತು ಪಡೆಯುವ ಹೆಸರಿನಲ್ಲಿ ಕೆಲವರು ಹಣ ನೀಡಿ ಮಕ್ಕಳನ್ನು ಪಡೆದು, ಒಂದೆರಡು ವರ್ಷಗಳ ನಂತರ ಸಾಕಲು ಸಾಧ್ಯವಿಲ್ಲ ಎಂದು ಮಕ್ಕಳನ್ನು ಬಿಟ್ಟು ಹೋಗುತ್ತಿರುವ ಘಟನೆಗಳೂ ಇವೆ. ಇದರಿಂದ ಮಕ್ಕಳಿಗೆ ಮಾನಸಿಕವಾಗಿ ತೀವ್ರ ನೋವು ಹಾಗೂ ಖಿನ್ನತೆ ಉಂಟಾಗುತ್ತದೆ. ಈಗಾಗಲೇ ಅನಾಥರಾಗಿರುವ ಮಕ್ಕಳು ಮತ್ತೆ ಅನಾಥ ಸ್ಥಿತಿಗೆ ತಲುಪುವಂತಾಗುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಸ್ನೇಹಲ್. ಆರ್. ಅವರ ಕುಟುಂಬದಲ್ಲಿಯೇ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದು, ಅವರು ಸಂತೋಷದಿಂದ ಪೋಷಕರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಮಕ್ಕಳಿಲ್ಲದವರು ಕಾನೂನುಬದ್ಧವಾಗಿ ದತ್ತು ಪಡೆಯಲು ಅವಕಾಶಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಮಕ್ಕಳನ್ನು ದತ್ತು ಪಡೆಯುವ ಆಸೆ ಹೊಂದಿರುವವರು ಸಮಾಜ ಏನೆಂದುಕೊಳ್ಳುತ್ತದೆ ಎಂಬ ಹಿಂಜರಿಕೆ ಬಿಟ್ಟು, ಕಾನೂನಿನ ಚೌಕಟ್ಟಿನಲ್ಲಿ ತಮ್ಮ ಆಸೆಯನ್ನು ಈಡೇರಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಮಕ್ಕಳು ದೇಶದ ಭವಿಷ್ಯವಾಗಿದ್ದು, ಇಂದಿನ ಮಕ್ಕಳನ್ನು ಉತ್ತಮವಾಗಿ ಬೆಳೆಸಿದಾಗ ಮಾತ್ರ ಮುಂದಿನ ಪೀಳಿಗೆ ಹಾಗೂ ಸಮಾಜ ಸದೃಢವಾಗಲು ಸಾಧ್ಯ. ಮಗುವಿನ ಜನನದಿಂದ ವೃದ್ಧಾಪ್ಯದವರೆಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಅಧಿಕಾರಿಗಳು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕಾರ್ಯಕ್ಕೆ ಸಮಾಜದ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.