ಡಾ. ಪ್ರವೀಣ ಶಹಾಪುರ ಅವರಿಗೆ ಕರ್ನಾಟಕ ವಿಜ್ಞಾನ ಅಕಾಡೆಮಿ ಫೆಲೋಶಿಪ್ ಗೌರವ
ವಿಜಯಪುರ 17 : ನಗರದ ಬಿ.ಎಲ್.ಡಿ.ಇ. ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಎಚ್.ಐ.ವಿ. ಪರೀಕ್ಷೆಗಾಗಿ ರಾಜ್ಯ ಪ್ರಯೋಗಾಲಯದ ನಿರ್ದೇಶಕ ಡಾ. ಪ್ರವೀಣ ರಾಜಶೇಖರ ಶಹಾಪುರ ಅವರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಪ್ರತಿಷ್ಠಿತ ಫೆಲೋಷಿಪ್ ಗೌರವ ಲಭಿಸಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರಕಾರದ ಅಂಗ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, 2024ನೇ ಸಾಲಿನ ವೈದ್ಯಕೀಯ ಮತ್ತು ವಿಧಿವಿಜ್ಞಾನ ಕ್ಷೇತ್ರದಲ್ಲಿ ಈ ಫೆಲೋಷಿಪ್ ಅನ್ನು ನೀಡಿದೆ.
ಅಕ್ಟೊಬರ್ 29ರಂದು ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ತೀರ್ಮಾನಿಸಿ ಈ ಗೌರವವನ್ನು ನೀಡಲಾಗಿದೆ ಎಂದು ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಆರ್. ಅವರು ತಿಳಿಸಿದ್ದಾರೆ.
ಕೆಎಸ್ಟಿಎ ಪ್ರಶಸ್ತಿ ಫೆಲೋಷಿಪ್ ಪ್ರದಾನ ಸಮಾರಂಭವು ಡಿಸೆಂಬರ್ ನಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಆಗಮಿಸಿ ಗೌರವ ಪ್ರದಾನ ಮಾಡಲಿದ್ದಾರೆ. ಡಾ. ಪ್ರವೀಣ ಶಹಾಪುರ ಅವರು ಎಚ್.ಐ.ವಿ. ಪರೀಕ್ಷೆ, ಸೂಕ್ಷ್ಮ ಜೀವಶಾಸ್ತ್ರ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗೆ ಈ ಗೌರವ ಸಂದಿದೆ.
ಅವರಿಗೆ ಫೆಲೋಶಿಪ್ ಲಭಿಸಿರುವುದಕ್ಕೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಾಧಿಪತಿ ಬಸನಗೌಡ ಎಂ. ಪಾಟೀಲ, ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಅರುಣ ಚಂ. ಇನಾಮದಾರ, ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ಅಭಿನಂದನೆ ಸಲ್ಲಿಸಿದ್ದಾರೆ. ಧನ್ಯವಾದಗಳು.