ವಿಜಯಪುರ

ಗಡಿ ಗ್ರಾಮಗಳಿಗೂ ಪ್ರಥಮ ಆದ್ಯತೆ ನೀಡಿ ಅಭಿವೃದ್ಧಿ; ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ

ಗಡಿ ಗ್ರಾಮಗಳಿಗೂ ಪ್ರಥಮ ಆದ್ಯತೆ ನೀಡಿ ಅಭಿವೃದ್ಧಿ; ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ
Development of border villages given top priority; groundbreaking ceremonies held for various projec

             ದೇವರಹಿಪ್ಪರಗಿ 17 : ಮತಕ್ಷೇತ್ರದ ಪ್ರತಿಯೊಂದು ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧನಾಗಿದ್ದು, ಕ್ಷೇತ್ರದ ಗಡಿ ಗ್ರಾಮಗಳನ್ನು ಕೂಡ ಪ್ರಥಮ ಆದ್ಯತೆಯ ಗ್ರಾಮಗಳಂತೆ ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ) ಹೇಳಿದರು.

           ತಾಲೂಕಿನ ತುರಕನಗೇರಿ, ಬೂದಿಹಾಳ ಪಿ.ಟಿ, ವಣಕಿಹಾಳ, ಹಾಳಗುಂಡಕನಾಳ, ಅಸಂತಾಪೂರ ಹಾಗೂ ಚಟ್ನಳ್ಳಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

             ಶಿಕ್ಷಣ, ರಸ್ತೆ, ಕುಡಿಯುವ ನೀರು, ಸೇತುವೆ ಹಾಗೂ ಸಮುದಾಯಗಳ ಮೂಲಸೌಕರ್ಯ ಸೇರಿದಂತೆ ಜನರ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಯಾವುದೇ ಗ್ರಾಮವನ್ನು ಅಭಿವೃದ್ಧಿಯಿಂದ ವಂಚಿತವಾಗಲು ಬಿಡುವುದಿಲ್ಲ. ಕ್ಷೇತ್ರದ ಗಡಿ ಗ್ರಾಮಗಳಿಗೂ ಸಮಾನ ಆದ್ಯತೆ ನೀಡಿ ಅಭಿವೃದ್ಧಿಪಡಿಸಲಾಗುವುದು ಎಂದರು.

              ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳಾದ ತುರಕನಗೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹೊಸ ಕೊಠಡಿ ನಿರ್ಮಾಣಕ್ಕೆ 20 ಲಕ್ಷ, ತುರಕನಗೇರಿ ಹಾಗೂ ಆಲಗೂರ ರಸ್ತೆಯಲ್ಲಿರುವ ಹಳ್ಳದ ಬ್ರಿಜ್ ನಿರ್ಮಾಣಕ್ಕೆ 20 ಲಕ್ಷ, ಗ್ರಾಮದ ಜಾಮಿಯಾ ಮಸೀದಿ ಅಭಿವೃದ್ಧಿಗೆ 7 ಲಕ್ಷ ರೂ ಅನುದಾನ, ಬೂದಿಹಾಳ.ಪಿ.ಟಿ ಗ್ರಾಮದಲ್ಲಿ ಸಿ.ಸಿ ರಸ್ತೆ ನಿರ್ಮಾಣಕ್ಕೆ 25 ಲಕ್ಷ, ರೇವಣಸಿದ್ದೇಶ್ವರ ದೇವಸ್ಥಾನದ ಹತ್ತಿರ ಸಮುದಾಯ ಭವನಕ್ಕೆ 5 ಲಕ್ಷ, ಗ್ರಾಮದ ಹತ್ತಿರ ಸುಮಾರು 2ಕೋಟಿ ರೂ ವೆಚ್ಚದ ಬ್ರಿಜ್ ನಿರ್ಮಾಣ, 

              ಅಂಬಿಗರ ಚೌಡಯ್ಯ ದೇವಸ್ಥಾನದ ಹತ್ತಿರ ಸಮುದಾಯ ಭವನಕ್ಕೆ 5 ಲಕ್ಷ ರೂ ವೆಚ್ಚದ ಅನುದಾನ, ವಣಕಿಹಾಳ ಗ್ರಾಮದ ಖಾದರ್ಲಿಂಗ ದರ್ಗಾ ಅಭಿವೃದ್ಧಿಗೆ 10 ಲಕ್ಷ ,ಹಾಳಗುಂಡಕನಾಳ ಗ್ರಾಮದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್ ಭವನ ನಿರ್ಮಾಣಕ್ಕೆ 20 ಲಕ್ಷ, ಅಸಂತಾಪೂರ ಗ್ರಾಮದಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ 25 ಲಕ್ಷ, ಮಾರುತೇಶ್ವರ ದೇವಸ್ಥಾನದ ಹತ್ತಿರ ಸಮುದಾಯ ಭವನಕ್ಕೆ 5 ಲಕ್ಷ ಹಾಗೂ ಚಟ್ನಳ್ಳಿ ಗ್ರಾಮದಲ್ಲಿ ಸಿ.ಸಿ ರಸ್ತೆ ಅಭಿವೃದ್ಧಿಗೆ 1ಕೋಟಿ,

               ಜಟ್ಟಿಂಗೇಶ್ವರ ದೇವಸ್ಥಾನದ ಹತ್ತಿರ ಸಮುದಾಯ ಭವನಕ್ಕೆ 5 ಲಕ್ಷ ರೂ ವೆಚ್ಚದ ಯೋಜನೆಗೆ ಸೇರಿದಂತೆವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷರಾದ ಸಾಯಿಬಣ್ಣ ಬಾಗೇವಾಡಿ ಸೇರಿದಂತೆ ಹಲವಾರು ಜನ ಮುಖಂಡರು ಮಾತನಾಡಿ, ಶಾಸಕ ರಾಜುಗೌಡ ಪಾಟೀಲ ಅವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಕ್ಷಭೇದ ಮರೆತು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಾಸಕರು ಶ್ರಮಿಸುತ್ತಿರುವುದು ಶ್ಲಾಘನೀಯ.

              ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಜನರ ಅಗತ್ಯಗಳಿಗೆ ಸ್ಪಂದಿಸಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿರುವುದು ಕ್ಷೇತ್ರದ ಪ್ರಗತಿಗೆ ಪೂರಕವಾಗಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಆಯಾ ಗ್ರಾಮಗಳ ಪ್ರಮುಖರು, ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಮತ್ತು ಜೆಡಿಎಸ್ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ